ದಾವಣಗೆರೆ ನಗರಕ್ಕೂ ರೈಲ್ವೆ ಸೇತುವೆ, ಕೆಳಸೇತುವೆಗಳಿಗೂ ಅವಿನಾಭಾವ ಸಂಬಂಧ????

IMG-20211121-WA0005

 

ದಾವಣಗೆರೆ: ದಾವಣಗೆರೆ ನಗರದ ಮಧ್ಯಭಾಗದಲ್ಲಿ ರೈಲ್ವೆ ನಿಲ್ದಾಣ ವಿದ್ದು, ಡಿಸಿಎಂ ಟೌನ್ಶಿಪ್ ಸೇತುವೆ, ಎಪಿಎಂಸಿ ಫ್ಲೈಓವರ್ ಕೆಳಭಾಗದಲ್ಲಿ ಇರುವ ಕೆಳ ಸೇತುವೆ, ಅಶೋಕ ಟಾಕೀಸ್ ಮುಂಭಾಗದ ರೈಲ್ವೆ ಗೇಟ್, ಮಹಾನಗರ ಪಾಲಿಕೆ ಮುಂಭಾಗವಿರುವ ಕೆಳ ಸೇತುವೆ, ರೇಣುಕಾ ಮಂದಿರ ಪಕ್ಕದಲ್ಲಿರುವ ಕೆಳ ಸೇತುವೆ ಹಾಗೂ ಮೀನುಮಾರುಕಟ್ಟೆ ಬಳಿ ಇರುವ ಬರುವ ಸೇತುವೆ.

ಹೀಗೆ 6 ಕಡೆ ದಾವಣಗೆರೆಯ ಹಳೆಯ ಮತ್ತು ಹೊಸ ನಗರದ ಜನರಿಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಚಲಿಸಲು ಸಂಚಾರ ಕೊಂಡಿಗಳಗಿವೆ ಎಂದರೆ ತಪ್ಪಾಗಲಾರದು.

ಆದರೆ ಈ ಆರು ಸಂಚಾರಿ ಕೊಂಡಿಗಳು ಎಷ್ಟೇ ಪ್ರಯತ್ನಿಸಿದರೂ ಸರಿ ಹೋಗದೆ ಇರುವುದು ಮಾತ್ರ ವಿಪರ್ಯಾಸ.

ಡಿಸಿಎಂ ಟೌನ್ಶಿಪ್ ಬಳಿಯಿರುವ ರೈಲ್ವೆ ಸೇತುವೆ ಬಗ್ಗೆ ಹೇಳುವುದೇ ಬೇಡ, ಭವಿಷ್ಯ ಇಡೀ ದೇಶದಲ್ಲಿಯೇ ಇಂತಹ ಸೇತುವೆಯನ್ನು ಯಾರು ನಿರ್ಮಿಸಿಲ್ಲ ಎಂದು ಸಾರ್ವಜನಿಕರು ತಮಾಷೆ ಮಾಡುತ್ತಿದ್ದು, ಪ್ರತಿವರ್ಷ ಇಂಜಿನಿಯರ್ ದಿನಾಚರಣೆಯಲ್ಲಿ ಸಾರ್ವಜನಿಕರು ಡಿಸಿಎಂ ಟೌನ್ಶಿಪ್ ಬಳಿ ಸೇತುವೆ ಮಾಡಿದ ಇಂಜಿನಿಯರ್ ಹೊರತುಪಡಿಸಿ ಇನ್ನುಳಿದ ಇಂಜಿನಿಯರುಗಳಿಗೆ, ಇಂಜಿನಿಯರ್ ದಿನದ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.

ಎಪಿಎಂಸಿ ಮೇಲ್ ಸೇತುವೆಯ ಕೆಳಭಾಗದಲ್ಲಿ ಕೆಳ ಸೇತುವೆ ನಿರ್ಮಿಸಿದ್ದು ಅದು ತೀರಾ ಅವೈಜ್ಞಾನಿಕವಾಗಿದ್ದು ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗಿರುವುದಿಲ್ಲ. ಮಳೆ ಬಂತೆಂದರೆ ಮೊಣಕಾಲುದ್ದ ನೀರು, ಇನ್ನು ಸಾಮಾನ್ಯ ದಿನಗಳಲ್ಲಿ ರಾತ್ರಿ ಸಂಚರಿಸಲು ವಿದ್ಯುತ್ ವ್ಯವಸ್ಥೆಯಿಲ್ಲ.. ಕಳ್ಳರಿಗೆ ಹೇಳಿ ಮಾಡಿಸಿದಂತಹ ಸ್ಥಳ ಆದರೆ ಇದರ ಬಗ್ಗೆ ರೈಲ್ವೆ ಇಲಾಖೆಯಾಗಲಿ ಪಾಲಿಕೆಗಾಗಲಿ ಗಮನವೇ ಇಲ್ಲ.

ಇನ್ನು ಅಶೋಕ ಟಾಕೀಸ್ ಮುಂಭಾಗದ ರೈಲ್ವೆಗೇಟ್ ಬಗ್ಗೆ ಹೇಳುವುದು ಏನು ಇಲ್ಲ, ಸಾರ್ವಜನಿಕರು ಅ ರಸ್ತೆಯಲ್ಲಿ ಓಡಾಡುವುದು ಭೂಲೋಕದ ನರಕ ಎಂದೇ ಭಾವಿಸಿದ್ದಾರೆ.

ಪಾಲಿಕೆ ಮುಂಭಾಗದ ಕೆಳಸೇತುವೆ ಬಗ್ಗೆ ಹೇಳುವುದಾದರೆ ಇದು ಪಾಲಿಕೆಯ ಹಾಗೂ ಕಂಟ್ರಾಕ್ಟರುಗಳ ಖಜಾನೆಯಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ, ಮಳೆ ಬಂತೆಂದರೆ ಅಲ್ಲಿ ನೀರು ನಿಲ್ಲುವುದು ತಪ್ಪಲ್ಲ ಬಂದ ಮಹಾನಗರ ಪಾಲಿಕೆಯ ಮೇಯರ್ ಗಳೆಲ್ಲ ತಮ್ಮದೇ ರೀತಿಯ ಯೋಜನೆಗಳನ್ನು ರೂಪಿಸಿ ಸರ್ಕಾರದ ಖಜಾನೆ ಉಪಯೋಗ ಪಡಿಸಿಕೊಳ್ಳುತ್ತಿದ್ದಾರೆ ವಿನಹ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ.

ರೇಣುಕಾ ಮಂದಿರ ಪಕ್ಕದಲ್ಲಿರುವ ಕೆಳ ಸೇತುವೆ ಯಲ್ಲಿ ಸಂಚರಿಸುವಾಗ ಗುಂಡಿಗಳು, ಮೂತ್ರದ ವಾಸನೆ, ರೈಲ್ವೆ ಹಳಿಗಳ ಕೆಳಭಾಗ ಹೋದರಂತೂ ಮೇಲಿಂದ ಬೀಳುವ ಜಿಟಿಜಿಟಿ ನೀರು ಅದನ್ನು ನೀರು ಎನ್ನಬೇಕೋ ಅಥವಾ ಬೇರೆ ಏನನ್ನು ಅನ್ನ ಬೇಕು ಎಂದು ಅಧಿಕಾರಿಗಳೇ ಹೇಳಬೇಕು.

ಇನ್ನು ಮೀನು ಮಾರುಕಟ್ಟೆ ಮುಂಭಾಗದ ರೈಲ್ವೆ ಗೇಟ್ ಸಮಸ್ಯೆ, ಇಲ್ಲಿ ಒಮ್ಮೆ ರೈಲು ಬಂತು ಎಂದು ರೈಲ್ವೆಗೇಟ್ ಹಾಕಿದರೆ ಟ್ರಾಫಿಕ್ ಮತ್ತೆ ಸಹಜ ಸ್ಥಿತಿಗೆ ಬರುವ ಹೊತ್ತಿಗೆ ಮತ್ತೊಂದು ರೈಲು ಬರುತ್ತದೆ ಈ ಭಾಗದ ಸಾರ್ವಜನಿಕರಂತೆ ಹಾಗೂ ಮಹಾನಗರಪಾಲಿಕೆಗೆ ಪ್ರತಿ ದಿನವಲ್ಲ ಪ್ರತಿಕ್ಷಣವು ಶಾಪ ಹಾಕುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಅಂತಿಮವಾಗಿ ಬಿಎಸ್ಎನ್ಎಲ್ ಕಚೇರಿ ಬಳಿ ಇರುವ ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ನಿಂದ ಮಾತ್ರ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದು ಇದನ್ನು ನಿರ್ಮಿಸಿದ ಪುಣ್ಯಾತ್ಮನಿಗೆ ನಮಸ್ಕರಿಸುತ್ತ ಇನ್ನುಳಿದ ಅರು ಕಡೆ ಜನಪ್ರತಿನಿಧಿಗಳು ಯಾವಾಗ ಶಾಶ್ವತ ಪರಿಹಾರ ಕಂಡು ಹಿಡಿಯುತ್ತಾರೆ ಎಂಬ ಯೋಚನೆಯಲ್ಲಿದ್ದಾರೆ.

ಕೆ.ಎಲ್.ಹರೀಶ್ ಬಸಾಪುರ.

Leave a Reply

Your email address will not be published. Required fields are marked *

error: Content is protected !!