ಜಿಲ್ಲಾಡಳಿತದಲ್ಲಿ ಮೊಳಗಿತು ಕನ್ನಡ ಕಹಳೆ ಏಕಕಾಲದಲ್ಲಿ 1500 ಕ್ಕೂ ಅಧಿಕ ಕಂಠದಿಂದ ಕನ್ನಡ ಡಿಂಡಿಮ ಗಾಯನ

ದಾವಣಗೆರೆ:ನಾವೆಲ್ಲ ಕನ್ನಡಿಗರು ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಅನ್ಯ ಭಾಷೆಗಳ ಪದಗಳನ್ನು ಕನ್ನಡದಲ್ಲಿ ಬಳಸುತ್ತಿದ್ದು, ಬೇರೆ ದೇಶದ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ಕನ್ನಡಿಗರು ಯಾವಾಗಲೂ ನಮ್ಮ ನಾಡು, ನಮ್ಮ ಸಂಸ್ಕೃತಿ, ನಮ್ಮ ಭಾಷೆಗೆ ಹೆಚ್ಚು ಆದ್ಯತೆ ನೀಡಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಧೀಮಂತಗೊಳಿಸಬೇಕು ಎಂದು ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮ ನವರ್ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿದ್ದ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವೆಲ್ಲರೂ ಪ್ರತಿ ವರ್ಷ ನ.01 ರಂದು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ನಮ್ಮ ನಾಡು, ನುಡಿ, ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಹಿರಿಮೆಯ ಉಳಿವಿಗಾಗಿ ಅತ್ಯಂತ ವಿಜೃಂಭಣೆಯಿAದ ಈ ನಾಡ ಹಬ್ಬವನ್ನಾ ಆಚರಿಸುತ್ತಾ ಬಂದಿದ್ದೇವೆ. ಆದರೆ ಇಂದು ನಾವೆಲ್ಲರೂ ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ನಮ್ಮ ಭಾಷೆಯ ಮಹತ್ವವನ್ನು ಲೆಕ್ಕಿಸುತ್ತಿಲ್ಲ.
ನಮ್ಮ ನಾಡಿನ ಪರಂಪರೆ, ಸಂಸ್ಕೃತಿ, ಭಾಷೆಯ ಹೆಚ್ಚಿನ ಒಲವನ್ನು ತೋರಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ಎಂದರು.
ಈ ನಿಟ್ಟಿನಲ್ಲಿ ಸರ್ಕಾರ ಕನ್ನಡಕ್ಕಾಗಿ ನಾವು ಎಂಬ ಅಭಿಯಾನದಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ಕನ್ನಡದಲ್ಲಿ ಮಾತನಾಡುವುದು, ಬರೆಯುವುದು, ಈ ನಾಡಿನ ಸಂಸ್ಕೃತಿಯನ್ನು ಹೆಚ್ಚಿಸುವಲ್ಲಿ ಸ್ಥಳೀಯ ಉಡುಪುಗಳು ಮತ್ತು ತಿನಿಸುಗಳನ್ನು ಪ್ರದರ್ಶಿಸುವಂತಹದು. ಮತ್ತು ಗಡಿ ತಾಲ್ಲೂಕುಗಳಲ್ಲಿ ಈ ನಾಡಿನ ಸಾಹಿತ್ಯ, ಕಲೆ, ಮತ್ತು ಸಂಸ್ಕೃತಿಯನ್ನು ಉಳಿಸುವ ಕಾರ್ಯಕ್ರಮಗಳು ಹಾಗೂ ಕನ್ನಡದ ವಿಶೇಷತೆಯನ್ನು ಸಾರುವಂತಹ 03 ಗೀತೆಗಳನ್ನು ಡಾ.ಕುವೆಂಪು ಅವರ ಕನ್ನಡ ಡಿಂಡಿಮ, ನಿಸ್ಸಾರ್ ಅಹಮ್ಮದ್‌ರವರ ನಿತ್ಯೋತ್ಸವ, ಹಂಸಲೇಖರವರು ರಚಿಸಿರುವ ಹುಟ್ಟಿದರೆ ಕನ್ನಡ ನಾಡಿನಲ್ಲೇ ಹುಟ್ಟಬೇಕು ಎಂಬ ಗೀತೆಗಳನ್ನು ಸಾಮೂಹಿಕವಾಗಿ ಹಾಡುವುದರ ಮುಖಾಂತರ ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯಲು ಸಿದ್ಧರಾಗೋಣಾ ಎಂದು ಪಣತೊಡುತ್ತ ಎಲ್ಲರೂ ಒಟ್ಟುಗೂಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಈ ವೇಳೆ ಸಿಇಒ ರವರು ಕನ್ನಡಕ್ಕಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಹಾಗೂ 1000 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು 600 ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಕನ್ನಡದ ಸಾರವನ್ನು ಸಾರುವ ಗೀತೆಗಳನ್ನು ಏಕಕಂಠದಲ್ಲಿ ಗೀತಾಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‌ಒ ಡಾ.ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳು, ಕನ್ನಡ ಜಾಗೃತಿ ಜಿಲ್ಲಾ ಹಾಗೂ ಪಾಲಿಕೆ ಸಮಿತಿ ಸದಸ್ಯರಾದ ಭಾ.ಮ.ಬಸವರಾಜಯ್ಯ, ಡಾ. ಭಿಕ್ಷಾವರ್ತಿ ಮಠ್, ಎನ್.ಟಿ ಎರ್ರಿಸ್ವಾಮಿ, ಮಹಾಲಿಂಗಪ್ಪ, ದಿಳ್ಯಪ್ಪ, ಸತ್ಯಭಾಮಾ, ದೇವಿಕಾ ಹಾಗೂ ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು