ಬಿಎಸ್ ವೈ ಭೇಟಿ ಮಾಡಿದ ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡರು
ದಾವಣಗೆರೆ: ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್. ಯುಡಿಯೂರಪ್ಪ ಅವರ ಆಹ್ವಾನದ ಮೇರೆಗೆ ದಾವಣಗೆರೆ ಬಿಜೆಪಿಯ ಪ್ರಮುಖ ನಾಯಕರ ನಿಯೋಗವು ಬೆಂಗಳೂರಿನಲ್ಲಿ ಭೇಟಿ ಮಾಡಿದೆ.
ಜಗಳೂರಿನ ಮಾಜಿ ಶಾಸಕ, ದಾವಣಗೆರೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಟಿ. ಗುರುಸಿದ್ದನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ, ಮತ್ತು ಮಾಡಾಳು ಮಲ್ಲಿಕಾರ್ಜುನ್ ಸೇರಿದಂತೆ ದಾವಣಗೆರೆ ಜಿಲ್ಲೆಯ ಪ್ರಮುಖರು ಬಿಎಸ್ವೈ ಅವರನ್ನು ಭೇಟಿ ಮಾಡಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕರಾಗಿ ಬಿ.ವೈ. ವಿಜಯೇಂದ್ರ ಇತ್ತೀಚಿಗೆ ಜವಾಬ್ದಾರಿ ವಹಿಸಿಕೊಂಡಿದ್ದು, ಶೀಘ್ರವೇ ದಾವಣಗೆರೆ ಜಿಲ್ಲೆಯ ಎಲ್ಲ ನಾಯಕರಿಗೂ ಪಕ್ಷದ ಶಿಸ್ತಿನ ಪಾಠ ಮಾಡಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿ, ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರೇ ನೇರವಾಗಿ ನನ್ನ ಮೊಬೈಲ್ಗೆ ಕರೆ ಮಾಡಿ ಮಾತನಾಡಿಸಿದರು.
ಪಕ್ಷವನ್ನು ಇಷ್ಟು ವರ್ಷ ಕಟ್ಟಿ ಬೆಳಸಿದ ಎಲ್ಲ ಹಿರಿಯರಿಗೂ ಧನ್ಯವಾದ ಹೇಳಲು ಕರೆ ಮಾಡಿರುವುದಾಗಿ ತಿಳಿಸಿದರು. ಜಿಲ್ಲಾ ಮಟ್ಟದಲ್ಲಿ ಕೆಲವರ ನಡವಳಿಕೆ ಸಣ್ಣ ಬೇಸರ ಮೂಡಿಸಿದರೂ, ಪಕ್ಷಕ್ಕಾಗಿ ಶ್ರಮಿಸಿದ ನನ್ನನ್ನು ರಾಷ್ಟ್ರೀಯ ಮಟ್ಟದ ನಾಯಕರೇ ಸ್ಮರಿಸಿ, ಅಭಿಮಾನ ವ್ಯಕ್ತಪಡಿಸಿದ್ದು ಖುಷಿ ನೀಡಿತು ಎಂದು ಹೇಳಿದರು.
ಬಿಜೆಪಿಯನ್ನು ನಾಲೈದು ದಶಕಗಳ ಕಾಲ ಕಟ್ಟಿ ಬೆಳೆಸಿದ ಗುರುಸಿದ್ದನಗೌಡರಿಗೆ ಇತ್ತೀಚಿಗೆ ಅಪಮಾನ ಆಗುವಂತೆ ನಡೆಸಿಕೊಳ್ಳಲಾಗಿದೆ. ಗುರುಸಿದ್ದನಗೌಡರು ಮತ್ತು ಡಾ.ರವಿಕುಮಾರ್ ಅವರೊಂದಿಗೆ ಎಂದೆಂದಿಗೂ ನಾವು ಇದ್ದೇವೆ.
ಜತೆಗೆ, ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಗುಂಪುಗಾರಿಕೆ, ಸ್ವಜನ ಪಕ್ಷಪಾತ ಮತ್ತು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ.