ದಾವಣಗೆರೆ : ಖಾತೆಯಿಂದ ಹಣ ಕಡಿತ ಮಾಡಿಕೊಂಡಿದ್ದವರಿಗೆ ದಾವಣಗೆರೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ

ಗ್ರಾಹಕರ ನ್ಯಾಯಾಲಯ
ದಾವಣಗೆರೆ : ನಕಲಿ ಸಾಲ ಸೃಷ್ಟಿಸಿ, ಖಾತೆಯಿಂದ ಹಣ ಕಡಿತ ಮಾಡಿಕೊಂಡಿದ್ದವರಿಗೆ ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗ ಸಂತ್ರಸ್ತ ಗ್ರಾಹಕರಿಗೆ 60 ಸಾವಿರ ಪರಿಹಾರ ಸೇರಿ 2 ಲಕ್ಷಕ್ಕೂ ಹೆಚ್ಚು ಹಣ ನೀಡಲು ಬಜಾಜ್ ಲಿಮಿಟೆಡ್ ಮತ್ತು ದಾವಣಗೆರೆಯ ಇಂಡಿಗೋ ಕಂಪ್ಯೂಟರ್ಸ್ಗೆ ಶುಕ್ರವಾರ ಆದೇಶಿಸಿದೆ. 2016ರ ಏಪ್ರಿಲ್ನಲ್ಲಿ ಬಜಾಜ್ ೈನಾನ್ಸ್ ನೌಕರ ಕುಮಾರಸ್ವಾಮಿ ಅವರು ಗೃಹಪಯೋಗಿ ವಸ್ತುಗಳ ಸಾಲ ಸೌಲಭ್ಯದ ಪ್ರಚಾರಕ್ಕೆ ತಾಲ್ಲೂಕಿನ ಎಕ್ಕೆಗೊಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದಿದ್ದರು. ಅಲ್ಲಿಯ ಶಿಕ್ಷಕಿ ವಿಜಯಾ ಅವರಿಗೆ ಲ್ಯಾಪ್ ಟಾಪ್ ಸಾಲ ಪಡೆಯುವಂತೆ ಮನವೊಲಿಸಿ, ಅವರ ಗುರುತು, ವಿಳಾಸ ಮತ್ತು ಬ್ಯಾಂಕ್ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಪಡೆದುಕೊಂಡಿದ್ದರು.
ನಂತರ ಇಂಡಿಗೋ ಕಂಪ್ಯೂಟರ್ಸ್ ವಿಜಯಾ ಅವರಿಂದ 1000 ಪ್ರೊಸೆಸಿಂಗ್ ಶುಲ್ಕ ಪಡೆದು ಬಜಾಜ್ ಸಾಲ ಯೋಜನೆಯಲ್ಲಿ 32,000 ಬೆಲೆಯ ಡೆಲ್ ಲ್ಯಾಪ್ ಟಾಪ್ ನೀಡಿದ್ದರು. ನಂತರ ಅವರ ಖಾತೆಯಿಂದ ನಿಗದಿಗಿಂತ ಹೆಚ್ಚುವರಿ ಹಣ ಕಡಿತವಾಗತೊಡಗಿತು. ಈ ಬಗ್ಗೆ ಬಜಾಜ್ ೈನಾನ್ಸ್ ಲಿಮಿಟೆಡ್ ಹಾವೇರಿ ಕಚೇರಿಗೆ ದೂರು ನೀಡಿದರೆ, ಅಲ್ಲಿನ ಮೇಲಧಿಕಾರಿಗಳು ಸಾಲದ ಬಾಕಿ ಇನ್ನೂ 11,847 ಉಳಿದಿದೆ ಎಂದು ಅದನ್ನು ಪಾವತಿಸಿಕೊಂಡು ಎನ್ಒಸಿ ನೀಡಿದ್ದರು.
ನಂತರವೂ ಖಾತೆಯಿಂದ ಹಣ ಕಡಿತವಾಗುವುದು ಮುಂದುವರಿದಿದ್ದರಿಂದ ಮತ್ತು ಕಂಪನಿಯ ವಸೂಲಾತಿ ಅಧಿಕಾರಿಗಳು ಸಾಲ ಮರುಪಾವತಿಗೆ ಕಿರುಕುಳ ನೀಡತೊಡಗಿದ್ದರು. ಶಿಕ್ಷಕಿ ವಿಜಯಾ 2019ರ ನವೆಂಬರ್ನಲ್ಲಿ ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಪರಿಹಾರ ಕೋರಿ ದೂರು ದಾಖಲಿಸಿದ್ದರು. ವಿಜಯಾ ಅವರ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, 32,000 ಲ್ಯಾಪ್ ಟಾಪ್ ಬದಲು 48,708 ಮೊತ್ತದ ಎಲ್ಇಡಿ ಟಿವಿ ಖರೀದಿಸಿದಂತೆ ಒಂದು ಸಾಲ, ಅಲ್ಲದೇ 65,510ರ ಮತ್ತೊಂದು ಸಾಲ ಸೃಷ್ಟಿಸಲಾಗಿತ್ತು. ಈ ಎರಡು ನಕಲಿ ಸಾಲಗಳಿಗೆ ಅವರ ಬ್ಯಾಂಕ್ ಖಾತೆಯಿಂದ 1,00,193 ಕಡಿತ ಮಾಡಿಕೊಂಡಿರುವುದು ವಿಚಾರಣೆಯಲ್ಲಿ ಸಾಬೀತಾಯಿತು. ವಿಜಯಾ ಅವರಿಂದ ವಸೂಲಿ ಮಾಡಿರುವ ಒಟ್ಟು 1,12,040 ಹಣ ಹಾಗೂ ಶೇ 9ರಷ್ಟು ಬಡ್ಡಿ ಸಮೇತ, ಖರ್ಚು-ವೆಚ್ಚ, ಪರಿಹಾರವಾಗಿ 60,000 ಸೇರಿ 2 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು 30 ದಿನಗಳೊಳಗೆ ನೀಡುವಂತೆ ಆಯೋಗದ ಅಧ್ಯಕ್ಷರಾದ ಎಂ.ಐ. ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಸಿ.ಎಸ್. ಮತ್ತು ಗೀತಾ ಬಿ.ಯು. ಆದೇಶಿಸಿದ್ದಾರೆ. ದೂರುದಾರರ ಪರ ವಕೀಲರಾದ ಬಿ.ಎಂ. ಸಿದ್ದಲಿಂಗಸ್ವಾಮಿ, ಇನಾಯತ್ ಉಲ್ಲಾ ಟಿ., ಜಿ.ಎಚ್. ಭಾಗೀರಥಿ ವಾದ ಮಂಡಿಸಿದ್ದರು.