ಸಾಲದ ಹೆಸರಲ್ಲಿ ರೈತರಿಗೆ ಮೋಸ: ಬ್ಯಾಂಕ್ ಹಾಗೂ ಸಿಜೆಆರ್ ಕಂಪನಿ ವಿರುದ್ದ ಆರೋಪ – ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ: ಸಾಲದ ಹೆಸರಲ್ಲಿ ರೈತರಿಗೆ ಮೋಸ ಮಾಡಿರುವ ಯೂಕೋ ಬ್ಯಾಂಕ್ ಮತ್ತು ಸಿ.ಜಿ.ಆರ್.ಕಂಪೆನಿಯವರನ್ನು ಒಳಗೊಂಡಂತೆ ವಂಚನೆಯಲ್ಲಿ ಶಾಮೀಲಾಗಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಈಲ್ಲಾಡಳಿತ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಯುಕೋ ಬ್ಯಾಂಕ್‌ನಲ್ಲಿ ಎರಡು ಎಕರೆ ಭೂಮಿಯೂ ಇಲ್ಲದ ಸುಮಾರು ೩೬ ಜನ ರೈತರಿಗೆ ಸುಮಾರು ೪೮ ಲಕ್ಷ ರು., ವರೆಗೆ ಸಾಲ ನೀಡಲಾಗಿದ್ದು, ಇದು ಸಂಬಂಧಪಟ್ಟ ರೈತರ ಗಮನಕ್ಕೆ ಬಂದಿಲ್ಲ. ಬದಲಾಗಿ ರೈತರಿಗೆ ಇಷ್ಟು ಮೊತ್ತದ ಹಣದಲ್ಲಿ ಕೇವಲ ೫೦ ಸಾವಿರದಿಂದ ೧ ಲಕ್ಷದವರೆಗೆ ಮಾತ್ರ ಕೊಡಲಾಗಿದ್ದು, ಉಳಿದ ಹಣವನ್ನು ರೈತರ ಖಾತೆಯಿಂದ ಸಿ.ಜಿ.ಆರ್.ಕಂಪೆನಿಯವರು ಆರ್.ಟಿ.ಜಿ.ಎಸ್ ಮಾಡಿಕೊಂಡಿರುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಪ್ರಕರಣವು ಕಳೆದ ೨೦೧೯ರಲ್ಲಿ ನಡೆದಿದ್ದು, ಈಗಾಗಲೇ ಸಾಕಷ್ಟು ಬಾರಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಗಮನಕ್ಕೆ ತರಲಾಗಿದೆಯಾದರೂ ಇದುವರೆಗೂ ಸಂಬಂಧಪಟ್ಟ ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ರೈತರ ಮೇಲೆ ಹೊರಿಸಲಾಗಿರುವ ಸಾಲವನ್ನು ಸಿ.ಜಿ.ಆರ್.ಕಂಪೆನಿ ಮೂಲಕ ವಾಪಸ್ ಪಡೆಯಬೇಕು, ಈ ಸಾಲದಿಂದ ರೈತರಿಗೆ ವಿಮುಕ್ತಿ ಕೊಡಬೇಕು. ಅಲ್ಲದೇ ಈ ಪ್ರಕರಣದಲ್ಲಿ ಶಾಮೀಲಾಗಿರುವ ದಾವಣಗೆರೆ ಯುಕೋ ಬ್ಯಾಂಕ್ ಸಿಬ್ಬಂದಿಗಳಾದ ಸುನೀಲ್, ಸಿದ್ದೇಶಿ ಮತ್ತು ನಾಗರಾಜ ಕೆರೆಯಾಗಳಹಳ್ಳಿ ಹಾಗೂ ಅಣಜಿ ಕೃಷ್ಣಪ್ಪ, ಬಿಳಿಚೋಡು ರಂಗಪ್ಪ ಸೇರಿದಂತೆ ಸಿಜಿಆರ್ ಕಂಪನಿಯ ಮಾಲೀಕರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎಂ. ಚನ್ನಬಸಪ್ಪ, ಮಂಜುನಾಥ್, ನಾಗಪ್ಪ, ಬಸವರಾಜ್ ಗೋಶಾಲೆ, ಪಾಲಾಕ್ಷಿ, ರಾಜೇಶ್ ಬೇತೂರು, ಪರಶುರಾಮ ಹೊಸಳ್ಳಿ ಪರಮೇಶ್ವರಪ್ಪ, ಜ್ಯೋತಿ, ಮಂಜುನಾಥ್ ಬಿಳಿಚೋಡು, ರಂಗನಾಥ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!