ಏಕಕಾಲಕ್ಕೆ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ‘ಸುರಕ್ಷಾ ದೀಪಾವಳಿಯ ಪ್ರಮಾಣವಚನ’ ಸ್ವೀಕಾರ

IMG-20211030-WA0078

ದಾವಣಗೆರೆ:ದೀಪಾವಳಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮನೆ ಮನೆಗಳಲ್ಲಿ ದೀಪಗಳ ಹಣತೆಗಳನ್ನು ಹಚ್ಚಿ ಜ್ಞಾನವೆಂಬ ಜ್ಯೋತಿ ಬೆಳಗಿಸುತ್ತಾ ಅರ್ಥಪೂರ್ಣವಾಗಿ ಆಚರಿಸುವಂತೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಮಕ್ಕಳಿಗೆ ಕರೆ ನೀಡಿದರು.

ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಸೇಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ಪರಿಸರ ಸಂರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅಮೃತ ಯುವಕ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸುರಕ್ಷಾ ದೀಪಾವಳಿ-2021 ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ದೀಪಾವಳಿ ಕೇವಲ ಪಟಾಕಿಗಳಿಂದ ಆಚರಣೆ ಮಾಡುವಂತಹುದ್ದಲ್ಲ. ಹಲವಾರು ಸಾಂಪ್ರದಾಯಿಕ ಹಿನ್ನೆಲೆಗಳಿವೆ. ಪಟಾಕಿ ಹಚ್ಚುವುದರಿಂದ ವಾಯು ಮಾಲಿನ್ಯವಾಗಿ, ಗಾಳಿಗೆ ವಿಷ ಅನಿಲ ಸೇರ್ಪಡೆಯಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕರೋನಾ ಎಂಬ ಮಹಾಮಾರಿಯಿಂದ ಎಲ್ಲರೂ ತತ್ತರಿಸಿ ಹೋಗಿದ್ದು, ಮತ್ತೆ ಕರೋನವನ್ನು ಸ್ವಾಗತಿಸುವುದು ಬೇಡ. ಕರೋನಾ ಎಂಬ ಮಹಾಮಾರಿ ನಮ್ಮ ದೇಶವನ್ನು ಬಿಟ್ಟು ಹೋಗಲಿ ಎಂಬ ಆಶಯದೊಂದಿಗೆ ಪಟಾಕಿಗಳನ್ನು ಬಿಟ್ಟು ಎಲ್ಲರ ಮನೆಗಳಲ್ಲೂ ಹಣತೆಗಳನ್ನು ಬೆಳಗಿಸುವುದರ ಮೂಲಕ ನಮಗೂ ಹಾಗೂ ಸುತ್ತಲೂ ಇರುವ ಪ್ರಾಣಿ ಪಕ್ಷಿ ಹಾಗೂ ನಮ್ಮ ಹಿರಿಯರಿಗೂ ತೊಂದರೆಯಾಗದ ರೀತಿ ದೀಪಾವಳಿ ಅರ್ಥಪೂರ್ಣವಾಗಿರಲಿ ಎಂದು ಕಿವಿಮಾತು ಹೇಳಿದರು.

ಸರ್ಕಾರ ಹಸಿರು ಪಟಾಕಿ ಸಿಡಿಸಲು ಅನುಮತಿಸಿದ್ದು, ಪಟಾಕಿ ಸಿಡಿಸುವವಾಗ ಸ್ಯಾನಿಟೈಸರ್ ಗಳನ್ನು ಹೆಚ್ಚಾಗಿ ಉಪಯೋಗಿಸದೇ, ಸೋಪಿನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕತ್ತಲಲಿ ಇರುವವರ ಜೀವನಕ್ಕೆ ನಾವೇ ದೀಪದಂತೆ ಆಗಿ ಈ ಬಾರಿಯ ದೀಪಾವಳಿಯನ್ನು ಆಚರಿಸಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾವಣಗೆರೆ ಗೌರವಾಧ್ಯಕ್ಷ ಜೆ.ಬಿ. ರಾಜು, ಪಟಾಕಿ ಹಚ್ಚುವುದರಿಂದ ಪ್ರತಿ ವರ್ಷವೂ ಹಲವಾರು ಮಕ್ಕಳು ಪ್ರಾಣ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಮಕ್ಕಳು ಹೊಗೆ ರಹಿತ ಹಸಿರ ಪಟಾಕಿಗಳನ್ನು ಮಾತ್ರ ಹಚ್ಚಬೇಕಾಗಿದೆ. ಪಟಾಕಿಗಳನ್ನು ಸಿಡಿಸುವಾಗ ಕಣ್ಣಿಗೆ ತೊಂದರೆಯಾಗದಂತೆ, ಅಪಾಯಕಾರಿ ಅಲ್ಲದ ಪಟಾಕಿಗಳನ್ನು ಮಾತ್ರ ಬಳಸಬೇಕು.

ಮುಖ ಕವಸುಗಳನ್ನು ಹಾಕಿಕೊಂಡು ಸ್ಯಾನಿಟೈಸರ್ ಗಳನ್ನು ದೂರವಿಟ್ಟು ಆದಷ್ಟು ಪಟಾಕಿ ರಹಿತವಾಗಿ
ಸಂಪ್ರದಾಯವನ್ನು ಪಾಲಿಸುವುದರ ಮೂಲಕ ದೀಪವನ್ನು ಹಚ್ಚಿ ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಬೇಕು ಎಂದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್ ಮಾತನಾಡಿ, ಯಾವುದೇ ಹಬ್ಬ ಆಚರಣೆಗಳು ಮಾಡಿದರೂ ಅದು ಪರಿಸರಕ್ಕೆ ಪೂರಕವಾಗಿರಬೇಕು . ಕೇವಲ ದೀಪಾವಳಿ ಮಾತ್ರವಲ್ಲ ಯಾವುದೇ ಹಬ್ಬದಲ್ಲೂ ಹಾಗೂ ಇತರ ಕಾರ್ಯಕ್ರಮಗಳಲ್ಲೂ ಪಟಾಕಿಯ ಬಳಕೆಯನ್ನು ನಿಲ್ಲಿಸಬೇಕು .

ಇದರಿಂದ ಕೇವಲ ಮನುಷ್ಯನಿಗಷ್ಟೆ ಅಲ್ಲ ಪ್ರಾಣಿ ಪಕ್ಷಿ ಸಂಕುಲಕ್ಕೂ ತೊಂದರೆ ಉಂಟಾಗುತ್ತದೆ‌. ಎಲ್ಲರಲ್ಲಿಯೂ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ . ಆದ್ದರಿಂದ ದೀಪಗಳ ಹಚ್ಚುವುದರ ಮೂಲಕ ಪ್ರೀತಿಪೂರ್ವಕವಾಗಿ ಹಬ್ಬದ ಆಚರಣೆ ಮಾಡಬೇಕೆಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಜಿ.ಕೆ. ಸಂತೋಷ್ ಮಾತನಾಡಿ, ಪರಿಸರ ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಈ ಬಾರಿ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಿದ್ದು, ಇದನ್ನು ಉಲ್ಲಂಘಿಸಿ ಹಸಿರು ಪಟಾಕಿ ಯ ಹೆಸರಲ್ಲಿ ಬೇರೆ ಪಟಾಕಿ ಮಾರಾಟ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ವೇಳೆ ನಿಧನರಾದ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಸಲ್ಲಿಸಲಾಯಿತು. ಪುನೀತ್ ಮಾಡಿರುವ ಸಾಮಾಜಿಕ ಸೇವೆಗಳನ್ನು ಸ್ಮರಿಸಲಾಯಿತು.
ಸೇಂಟ್ ಜಾನ್ಸ್ ಶಾಲೆ ಸೇರಿದಂತೆ ಏಕಕಾಲಕ್ಕೆ ನೂರಾರು ಶಾಲೆಗಳಲ್ಲಿ ಸಾವಿರಾರು ಶಾಲಾ ಮಕ್ಕಳಿಂದ ಸುರಕ್ಷಿತ ದೀಪಾವಳಿ ಆಚರಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಸೇಂಟ್ ಜಾನ್ಸ್ ಸಿಬಿಎಸ್ ಸಿ ಪ್ರೌಢಶಾಲೆಯ ಪ್ರಾಂಶುಪಾಲ ವಿ.ಎನ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸೆಂಟ್ ಜಾನ್ಸ್ ಕಾನ್ವೆಂಟ್ ಪ್ರಾಂಶುಪಾಲರಾದ ಜ್ಯೋತಿ ಎನ್. ಉಪಾಧ್ಯಾಯ, ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್. ದೇವರಮನೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಅಮೃತಾ ಯುವಕ ಸಂಘದ ಅಧ್ಯಕ್ಷ ಆರ್.ಬಿ. ಹನುಮಂತಪ್ಪ ಸೇರಿದಂತೆ ಇತರರು ಇದ್ದರು

 

Leave a Reply

Your email address will not be published. Required fields are marked *

error: Content is protected !!