ದೇಶದಲ್ಲಿ ಶೇ.46ಕ್ಕೆ ಏರಿದ ನಿರುದ್ಯೋಗ ಸಮಸ್ಯೆ: ಆನಂದ್ ಮೋಹನ್ ಮಾಥುರ್ ಅಸಮಾಧಾನ

ದಾವಣಗೆರೆ:ಕೆಲವು ದೇಶಗಳು ಉದ್ಯೋಗವನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ್ದು, ಅಲ್ಲಿ ಯಾವುದೇ ಸರ್ಕಾರ ಉದ್ಯೋಗ ಕೊಡದಿದ್ದಲ್ಲಿ, ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಬಹುದು. ಹಾಗೆಯೇ ನಮ್ಮ ದೇಶದಲ್ಲಿಯೂ ಸಹ ಉದ್ಯೋಗವನ್ನು ಮೂಲಭೂತ ಹಕ್ಕೆಂದು ಘೋಷಿಸುವಂತೆ ಆಗ್ರಹಿಸಿ ಹೋರಾಟ ನಡೆಸಬೇಕಿದೆ ಎಂದು ಮಧ್ಯಪ್ರದೇಶದ ಮಾಜಿ ಅಡ್ವೋಕೇಟ್ ಜನರಲ್ ಆನಂದಮೋಹನ್ ಮಾಥುರ್ ಕರೆ ನೀಡಿದರು.

ಎಐಡಿವೈಓ ಅಖಿಲ ಭಾರತ ಸಮಿತಿ ಹಾಗೂ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ವತಿಯಿಂದ ನಿರುದ್ಯೋಗದ ವಿರುದ್ಧ ಹಮ್ಮಿಕೊಂಡಿದ್ದ ಅಖಿಲ ಭಾರತ ಮಟ್ಟದ ರಾಷ್ಟ್ರೀಯ ಯುವಜನ ಆನ್‌ಲೈನ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾವಂತ ನಿರುದ್ಯೋಗಿಗಳು ಕೆಲಸದ ಬೇಟೆಯಲ್ಲಿ ನಿರತರಾಗಿ ಹೈರಾಣಾಗುತ್ತಿದ್ದು, ಸರ್ಕಾರದ ಆಶ್ವಾಸನೆಗಳಿಂದ ಭ್ರಮನಿರಸನಗೊಂಡಿದ್ದಾರೆ, ಹತಾಶೆಗೊಳಗಾಗಿದ್ದಾರೆ. ಸತತವಾಗಿ ಸರ್ಕಾರಗಳೆಲ್ಲವೂ ಯುವಜನತೆಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ದ್ರೋಹ ಬಗೆದಿವೆ. ಇಂದು ದೇಶದ ನಿರುದ್ಯೋಗದ ಪ್ರಮಾಣವು ಶೇ.46 ರಷ್ಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿಯು ನಿರಾತಂಕದಿಂದ ನಡೆದರೆ ಕೃಷಿಕರಿಗೆ ಉದ್ಯೋಗ ಸಿಗುತ್ತದೆ. ಉದ್ದಿಮೆಗಳು ತಡೆರಹಿತವಾಗಿ ನಡೆದರೆ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಆದರೆ, ಇಂದು ಕೃಷಿ ಮತ್ತು ಉದ್ದಿಮೆಗಳೆರಡೂ ನೆಲಕಚ್ಚಿವೆ. ಕೃಷಿಕರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಲ್ಪಸ್ವಲ್ಪ ಸರ್ಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೇಶದ ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ  ಸರ್ಕಾರಗಳು ಯುವಜನರನ್ನು ಈ ವಿಷಯದಲ್ಲಿ ನಿರಾಸೆಗೊಳಿಸುತ್ತಲೇ ಬಂದಿವೆ. ಚುನಾವಣೆಗಳ ಸಂದರ್ಭದಲ್ಲಿ ನಿರುದ್ಯೋಗ ಸಮಸ್ಯೆಯು ಚರ್ಚೆಯ ಮುಖ್ಯ ವಿಷಯವಾಗಿರುತ್ತದೆ.ಆದರೆ, ಅಧಿಕಾರಗ್ರಹಣವಾದೊಡನೆ ಎಲ್ಲಾ ಸರ್ಕಾರಗಳೂ ಇದನ್ನು ಮರೆಯುತ್ತವೆ ಎಂದು ದೂರಿದರು.

ಎರಡನೇ ಬಾರಿಗೆ ಬಹುದೊಡ್ಡ ಆಶ್ವಾಸನೆಗಳೊಂದಿಗೆ ಅಧಿಕಾರ ಹಿಡಿದ ಬಿಜೆಪಿಯು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುತ್ತಿದೆ. ಬ್ಯಾಂಕ್, ರೈಲ್ವೆ, ಎಲ್‌ಐಸಿ, ಅಂಚೆ ಮೊದಲಾದ ಸರ್ಕಾರಿ ಉದ್ದಿಮೆ ಮತ್ತು ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿವೆ, ಆದರೆ ನೇಮಕ ಮಾಡಿಕೊಳ್ಳುತ್ತಿಲ್ಲ. ಇರುವ ಹುದ್ದೆಗಳನ್ನು ನಾಶಮಾಡುತ್ತಿದೆ. ಪ್ರಧಾನಿ ಮೋದಿ ಉದ್ಯೋಗವನ್ನು ನೀಡುವ ವಾಗ್ದಾನ ನೀಡಿದ್ದರು. ಆದರೆ, ಕಳೆದ 5 ವರ್ಷಗಳಿಂದ 15 ಸಾವಿರ ಹುದ್ದೆಗಳೂ ಸೃಷ್ಟಿಯಾಗಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.

ನಿರುದ್ಯೋಗದಿಂದ ತತ್ತರಿಸುತ್ತಿರುವ ದೇಶದ ಯುವಜನರು ಉದ್ಯೋಗಗಳನ್ನು ಸೃಷ್ಟಿಸುವ ‘ಹೊಸದಾದ ಸಮಗ್ರ ಉದ್ಯೋಗ ನೀತಿ’ಯನ್ನು ಜಾರಿಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ ಹೋರಾಟವನ್ನು ಮುನ್ನಡೆಸಬೇಕು ಎಂದು ಅವರು ಕರೆ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!