ದೇವದಾಸಿ ಪುನರ್ವಸತಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ದೇವದಾಸಿ ಪುನರ್ವಸತಿ ಯೋಜನೆಯಡಿಯಲ್ಲಿ ಆದಾಯೋತ್ಪನ್ನ ಚಟುವಟಿಕೆಗಳಿಗಾಗಿ ಸಹಾಯಧನ ಮಂಜೂರು ಮಾಡಲು ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರತಿ ಫಲಾನುಭವಿಗಳಿಗೆ 30 ಸಾವಿರ ರೂ., ಮಂಜೂರು ಮಾಡುವ ಯೋಜನೆಗಾಗಿ ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದ್ದು, ಈ ಯೋಜನೆಯಡಿ 11 ಫಲಾನುಭವಿಗಳಿಗೆ ಹಾಗೂ ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯಡಿ ಬಳಕೆಯಾಗದ ಅನುದಾನದಿಂದ 10 ಫಲಾನುಭವಿ ಸೇರಿದಂತೆ ಒಟ್ಟು 21 ಫಲಾನುಭವಿಗಳಿಗೆ ತಲಾ 30 ಸಾವಿರ ರೂ. ಸಹಾಯಧನ ಮಂಜೂರು ಮಾಡಲಾಗುವುದು.
ಸ್ವಯಂ ಉದ್ಯೋಗ ಕೈಗೊಳ್ಳಲು ಈಗಾಗಲೇ ಸರ್ಕಾರದ ಯಾವುದೇ ಯೋಜನೆಯಡಿ ಸಹಾಯಧನ ಪಡೆಯದೇ ಇರುವ ಮಾಜಿ ದೇವದಾಸಿ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ದೇವದಾಸಿ ಪುನರ್ವಸತಿ ಯೋಜನೆಯ ಆಯಾ ತಾಲ್ಲೂಕಿನ ಯೋಜನಾ ಅನುಷ್ಠಾನಾಧಿಕಾರಿಗಳಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಆ. 31ರೊಳಗೆ ಕಚೇರಿಗೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಮತ್ತು ಮಧ್ಯವರ್ತಿಗಳಿಂದ ಬಂದ ಅರ್ಜಿಗಳನ್ನು ಹಾಗೂ ಅಪೂರ್ಣ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಸಹಾಯಧನ ಮಂಜೂರಾತಿಗಾಗಿ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್‌ಪುಸ್ತಕ, ವಿಳಾಸ ಹೊಂದಿರುವ ಗುರುತಿನ ಚೀಟಿ, ಆಧಾರ್‌ಕಾರ್ಡ್, ಜಾತಿ ಮತ್ತು ಪ್ರಮಾಣಪತ್ರ ಹಾಗೂ 4 ಭಾವಚಿತ್ರದೊಂದಿಗೆ ನಿಗದಿಪಡಿಸಿದ ಅರ್ಜಿ ನಮೂನೆಯನ್ನು ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಜ್ಞಾಪಾಟೀಲ್ ದಾವಣಗೆರೆ- 9886440107, ಉಮಾದೇವಿ ಎಮ್.ಜೆ ಹರಿಹರ, ಚನ್ನಗಿರಿ, ಹೊನ್ನಾಳಿ- 9164133372, ಕುಸುಮಾ.ಬಿ.ಸಿ ಜಗಳೂರು- 7676932625 ಕ್ಕೆ ಸಂಪರ್ಕಿಸಬಹುದು ಎಂದು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದ್ದಾರೆ.