ಧಾಬೋಲ್_ ಬೆಂಗಳೂರು ಕೊಳವೆ ಅನಿಲ ಮಾರ್ಗ: ನೈಸರ್ಗಿಕ ಅನಿಲ ಸೋರಿಕೆ ಅವಘಡ ಕುರಿತು ಜಗಳೂರಿನಲ್ಲಿ ಅಣಕು ಪ್ರದರ್ಶನ

ದಾವಣಗೆರೆ: ನೈಸರ್ಗಿಕ ಅನಿಲ ಸೋರಿಕೆಯಾದಾಗ ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಗೇಲ್ ಕಂಪನಿ ವತಿಯಿಂದ ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಗೇಲ್(ಇಂಡಿಯಾ) ಲಿ. ಕಂಪನಿ ವತಿಯಿಂದ ಜಗಳೂರು ತಾಲ್ಲೂಕಿನ ಸಂತೆಮುದ್ದಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಗೇಲ್ ಕಂಪನಿಯ ವಿವಿಧ ವಿಭಾಗಗಳ ತಂಡಗಳು ಕೊಳವೆ ಮಾರ್ಗದಲ್ಲಿ ಅನಿಲ ಸೋರಿಕೆಯಾದಲ್ಲಿ ಕಂಪನಿ ಸ್ಪಂದಿಸುವ ರೀತಿ ಹಾಗೂ ಸಾರ್ವಜನಿಕರು ನೀಡಬೇಕಾದ ಸಹಕಾರ ಕುರಿತು ಪ್ರದರ್ಶನದಲ್ಲಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಅನಿಲ ಕೊಳವೆ ಹಾದು ಹೋಗಿರುವ ಜಮೀನುಗಳ ಮಾಲೀಕರು ಕಂಪನಿ ನಿಗದಿಪಡಿಸಿರುವ ಸ್ಥಳದಲ್ಲಿ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ಪೈಪ್ ಲೈನ್ ಇರುವ ಕಡೆ ಯಾವುದೇ ರೀತಿಯ ನಿರ್ಮಾಣ ಕಾಂiÀರ್i ಮಾಡಬಾರದು, ಅಲ್ಪಾವಧಿಯ ಬೆಳೆಗಳನ್ನು ಮಾತ್ರ ಬೆಳೆದುಕೊಳ್ಳಬೇಕು, ಈಗಾಗಲೇ ಕೊಳವೆ ಹಾದು ಹೋಗಿರುವ ಜಾಗಕ್ಕೆ ಪರಿಹಾರ ನೀಡಲಾಗಿದೆ ಆದುದರಿಂದ ಆ ಸ್ಥಳದಲ್ಲಿ ಧೀರ್ಘಾವಧಿ ಬೆಳೆಗಳನ್ನು ಬೆಳೆಯಬಾರದು ಮತ್ತು ಎಲ್ಲಿಯಾದರೂ ಅನಿಲ ಸೋರಿಕೆ ಅಥವ ಕೊಳವೆ ಮಾರ್ಗಕ್ಕೆ ಯಾರಾದರು ಹಾನಿ ಮಾಡುತ್ತಿರುವುದು ಕಂಡುಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ತಿಳಿಸಿ ಎಂದರು. ಹಾಗೂ ಕಂಪನಿ ವತಿಯಿಂದ ಸಾರ್ವಜನಿಕರಿಗೆ ಹೆಚ್ಚು ಮಾಹಿತಿ ನೀಡಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಕೊಳವೆ ಮಾರ್ಗದಲ್ಲಿ ಅನಿಲ ಸೋರಿಕೆಯಂತಹ ಅವಘಢಗಳು ಸಂಭವಿಸಿದಾಗ ಹೆಚ್ಚು ಜನ ಜಂಗುಳಿ ಸೇರುತ್ತದೆ, ಅಂತಹ ಸಂದರ್ಭದಲ್ಲಿ ಜನರ ಗುಂಪನ್ನು ಹೇಗೆ ನಿರ್ವಹಿಸುತ್ತೀರಿ ಎಂಬ ಬಗ್ಗೆ ಯೂ ಪ್ರದರ್ಶನದಲ್ಲಿ ತಿಳಿಸಿಕೊಡಿ ಎಂದರು.
ಗೇಲ್ ಇಂಡಿಯಾ ಕಂಪನಿಯ ಮುಖ್ಯಸ್ಥರಾದ ಬಸವರಾಜ್ ಮಾತನಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ಅಣಕು ಪ್ರದರ್ಶನಗಳನ್ನು ನಡೆಸಲಾಗುತ್ತದೆ, ಹಾಗೂ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಕೊಳವೆ ಮಾರ್ಗ ಹಾದು ಹೋಗಿರುವ ಕಡೆ ಪ್ರತಿ ನೂರು ಮೀಟರಿಗೆ ಬೌಂಡರಿ ಕಲ್ಲು ಹಾಕಲಾಗಿರುತ್ತದೆ ಮತ್ತು ಎರಡೂ ಬದಿ ಇಂಡಿಕೇಟರ್ ಬೋರ್ಡಗಳಿರುತ್ತವೆ. ತಿಂಗಳಿಗೊಮ್ಮೆ ಲೈನ್ ವಾಕ್ ಇರುತ್ತದೆ. ಸದ್ಯದಲ್ಲಿಯೇ ಮನೆಮನೆಗಳಿಗೆ ಪೈಪ್ ಮುಖಾಂತರ ಗ್ಯಾಸ್ ನೀಡುವ ಕಾರ್ಯ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಗಳೂರು ತಹಶಿಲ್ದಾರ್ ಸಂತೋಷ್, ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಜಯಣ್ಣ, ಗೇಲ್ ಕಂಪನಿಯ ಸಿಬ್ಬಂದಿ, ಸ್ಥಳೀಯ ರೈತರು ಗ್ರಾಮಸ್ಥರು ಹಾಜರಿದ್ದರು.