Dhuda Plate: ನಾಮಕರಣ ಮಾಡಿ ಕಲ್ಲಿನ ಬೋರ್ಡ್ ಹಾಕಿ ತಿಂಗಳಿಗೆ ನಾಮಫಲಕ ಪುಡಿಪುಡಿ.!

ದಾವಣಗೆರೆ: ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಡಿ. ದೇವರಾಜ ಅರಸ್ ಬಡಾವಣೆಯಲ್ಲಿ ನಿರ್ಮಿಸಿರುವ ಮೇಲ್ಸೇತುವೆಗೆ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ರಸ್ತೆ ಎಂದು ನಾಮಕರಣ ಮಾಡಿ, ಉದ್ಘಾಟಿಸಿದ್ದ ನಾಮಫಲಕ ಪುಡಿ-ಪುಡಿಯಾಗಿ ನೆಲಸಮಗೊಂಡಿದೆ!
ಹೌದು, ನಾಮಕರಣ ಮಾಡಿ ಬೋರ್ಡ್ ಹಾಕಿ ತಿಂಗಳು ಕಳೆಯುತ್ತಿದ್ದಂತೆ ನಾಮಫಲಕ ಪುಡಿಪುಡಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಜುಲೈ 13 ರಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ನಾಮಫಲಕ ಉದ್ಘಾಟಿಸಿದ್ದರು. ಇದಕ್ಕೆ ಶಾಸಕ ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸಾಕ್ಷಿಯಾಗಿದ್ದರು.
ಆದರೆ, ನಾಮಫಲಕ ಉದ್ಘಾಟಿಸಿ ತಿಂಗಳಾಗುತ್ತಿದ್ದಂತೆ ದೀಢೀರೆಂದು ಅದು ಪುಡಿಯಾಗಿ ನೆಲಕ್ಕೆ ಉರುಳಿರುವ ಹಿಂದೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ, ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಯಾರೋ ಬೇಕು ಅಂತ ಬಿಳಿಸಿರಬೇಕು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಯಾರಾದರೂ ಬಿಳಿಸಿದ್ದರೆ, ಸಿಸಿಟಿವಿ ಪರೀಕ್ಷೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ, ಕಳಪೆಯಾಗಿದ್ದರೆ ಸಂಬಂಧಿಸಿದವರ ವಿರುದ್ದ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಒಟ್ಟಾರೆ ಇದರ ಸತ್ಯಾಸತ್ಯತೆ ಅದ್ಯಾವಾಗ ಹೊರಬರುವುದೊ? ಹೊಸದಾಗಿ ನಾಮಫಲಕ ಹಾಕಲು ಅದಿನ್ನೆಷ್ಟು ದಿನಗಳು ಆಗಬೇಕೊ.? ಇದರ ಖರ್ಚಿನ ದುಡ್ಡು ಯಾರದ್ದು.? ಎಂಬುದನ್ನು ಪ್ರಾಧಿಕಾರವೇ ಉತ್ತರಿಸಬೇಕಿದೆ.