ಚಾಮರಾಜಪೇಟೆ ಗಣೇಶೋತ್ಸವಕ್ಕೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ.! ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಆರ್.ಅಶೋಕ್

ಬೆಂಗಳೂರು : ಗಣೇಶ ಹಬ್ಬಕ್ಕೆ ಇನ್ನು ಕೆಲವೆ ದಿನಗಳು ಬಾಕಿಯಿದ್ದು ಈಗಾಗಲೇ ಎಲ್ಲೆಡೆಯೂ ಕೂಡ ಸಿದ್ದತೆಗಳು ಭರದಿಂದ ನಡೆಯುತ್ತಿವೆ.ಆದ್ರೆ ಗಣೇಶೋತ್ಸವದ ಈ ಹೊತ್ತಿನಲ್ಲಿ ಎಲ್ಲರ ಚಿತ್ತ ನೆಟ್ಟಿರುವುದು ಮಾತ್ರ ಚಾಮರಾಜಪೇಟೆಯ ಆಟದ ಮೈದಾನದ ಗಣೇಶೋತ್ಸವದ ಮೇಲೆ.ಚಾಮರಾಜಪೇಟೆ ಆಟದ ಮೈದಾನ ಯಾರಿಗೆ ಸೇರಿದ್ದು ಅಂತ ಬಿಬಿಎಂಪಿ ಮತ್ತು ವಕ್ಫ್ ಬೋರ್ಡ್ ನಡುವೆ ಭಾರಿ ಜಟಾಪಟಿ ನಡೆದರೂ ಕೂಡ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ತೀರ್ಮಾನ ಮಾಡಲಾಗಿತ್ತು.ಅದರ ಬೆನ್ನಲ್ಲೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವಕ್ಕೆ ಧ್ವಜರೋಹಣ ಮಾಡಲು ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು ಆದರೆ ಕಂದಾಯ ಇಲಾಖೆ ಆ ಜಾಗ ಸರ್ಕಾರದ ವ್ಯಾಪ್ತಿಯಲ್ಲಿದೆ ಎಂದು ಕಂದಾಯ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ರಿಂದ ಧ್ವಜರೋಹಣ ನೆರವೇರಿಸಿ ಸಮಸ್ಯೆಗೆ ಪರಿಹಾರ ನೀಡಿತ್ತು.ಆದರೆ ಈಗ ಮತ್ತೆ ಆಟದ ಮೈದಾನ ವಿವಾದ ಮುನ್ನಲೆಗೆ ಬಂದಿದ್ದು ಗಣೇಶೋತ್ಸವ ನಡೆಸುವ ಬಗ್ಗೆ ಪೈಪೋಟಿ ಶುರುವಾಗಿದೆ.
ಈ ವಿಚಾರವಾಗಿ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು ನನಗೆ ಯಾವುದೇ ಮನವಿ ಪತ್ರ ಬಂದಿಲ್ಲ. ಜಿಲ್ಲಾಧಿಕಾರಿಗಳಿಗೆ ಬಂದಿರಬಹುದು. ಕೆಲ ಮಾಧ್ಯಮ ಗಳಲ್ಲಿ ಬೇರೆ ರೀತಿ ಸುದ್ದಿ ಬರ್ತಿದೆ.ಇದುವರೆಗೂ ಯಾವುದೇ ಅನುಮತಿಯನ್ನು ಯಾರಿಗೂ ಕೊಟ್ಟಿಲ್ಲ. ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ. ಗಣಪತಿ ಹಬ್ಬದ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆಯಾಗಬೇಕಿದೆ. ಚಾಮರಾಜಪೇಟೆ ಸರ್ವೆ ನಂ 40 ಗುಟ್ಟಹಳ್ಳಿಯಲ್ಲಿ ಗಣೇಶ ಹಬ್ಬವನ್ನು ಆಚರಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಅಲ್ಲಿ ಗಣೇಶೋತ್ಸವ ಮಾಡಬೇಕಾ ಬೇಡ್ವಾ ಅನ್ನೋ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಅದುವರೆಗೂ ಯಾವುದೇ ಚರ್ಚೆ ಬೇಡ ಎಂದು ತಿಳಿಸಿದರು.ಅಲ್ಲದೇ ಯಾವುದೇಸಮುದಾಯದವರು ಕಿಡಿ ಹೊತ್ತಿಸುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
*ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಕಂದಾಯ ಸಚಿವ ಆರ್.ಅಶೋಕ್ ಕಿಡಿ*
ಪ್ರತೀ ದಿನ ಸಿದ್ದರಾಮಯ್ಯ ಹಿಂದೂಗಳ ಅವಹೇಳನ ಮಾಡುತ್ತಾರೆ. ಮಾಂಸ ತಿನ್ನಬಾರದಾ.? ಅಂತ ಪ್ರಶ್ನೆ ಮಾಡ್ತಾರೆ.ಇಂತಹ ಹೇಳಿಕೆಗಳನ್ನು ಕೊಟ್ಟು ಜನರಲ್ಲಿ ಗೊಂದಲ ಹುಟ್ಟಿಸಿದ್ದಾರೆ.ಪ್ರತಿಯೊಬ್ಬರಿಗೂ ಅವರವರ ಆಹಾರ ಪದ್ಧತಿ ಇದೆ, ಅದಕ್ಕೆ ವಿರೋಧ ಇಲ್ಲ. ಆದರೆ ದೇವಸ್ಥಾನಕ್ಕೆ ಹೋಗಲು ಕೆಲ ಅಘೋಷಿತ ನಿಯಮ ಇದೆ.
ಅಡುಗೆ ಮನೆಯಲ್ಲಿ, ಬಚ್ಚಲ ಮನೆಯಲ್ಲಿ ಏನು ಮಾಡಬೇಕೋ ಅದನ್ನ ಅಲ್ಲಿಯೇ ಮಾಡಬೇಕು.ಅದಕ್ಕೆ ಯಾರೂ ನಿಯಮ ಮಾಡಿರುವುದಿಲ್ಲ. ಅದು ಸಾಮಾನ್ಯ ಜ್ಞಾನ. ಎಲ್ಲರೂ ತಿಳಿದಿರಬೇಕು. ದೇವಸ್ಥಾನಕ್ಕೆ ಹೋಗಲು ಮಡಿ ಇರುತ್ತೆ, ಮಾಂಸ ತಿನ್ನಬಾರದು ಅಂತ ನಿಯಮ ಇದೆ. ಮುಸ್ಲಿಂ ಸಮುದಾಯದಲ್ಲೂ ಕೆಲ ಆಚರಣೆ ಇದೆ. ರಂಜಾನ್ ಬಂದಾಗ ಉಪವಾಸ ಇರ್ತಾರೆ. ಅದನ್ನ ಸಿದ್ದರಾಮಯ್ಯ ಯಾಕೆ ಪ್ರಶ್ನೆ ಮಾಡಲ್ಲ. ಉಪವಾಸ ಮಾಡಬೇಡಿ, ತಿನ್ನಿ ಏನೂ ಆಗಲ್ಲ ಅಂತ ಹೇಳಲಿ ನೋಡೋಣ. ಕ್ರಿಶ್ಚಿಯನ್ ಅವರದ್ದು ಗುಡ್ ಪ್ರೈಡೆ ಇದೆ ಅವರಿಗೆಲ್ಲ ಮಾಡಬೇಡಿ ಅಂತ ಹೇಳಲ್ಲ. ಹಿಂದೂ ಧರ್ಮದ ಬಗ್ಗೆ ಮಾತ್ರ ಅವಹೇಳನ ಮಾಡ್ತಾರೆ. ಹಿಂದೂಗಳಿಗೆ ಮಾತ್ರ ಯಾಕೆ ಹೇಳ್ತೀರಾ.? ಎಲ್ಲರಿಗೂ ಹೇಳಿ.
ಕೊಡಗಿನಲ್ಲಿ ಟಿಪ್ಪು ಜಯಂತಿ ಮಾಡಿದಿರಿ. ಅದರಿಂದ ಸಾವು ಕೂಡ ಆಯ್ತು. ಸುಮ್ಮನೆ ಯಾವುದೇ ಕೋಮು ಭಾವನೆ ಕೆರಳಿಸಬೇಡಿ. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕ್ತೀರಾ ಅಂತೀರಾ.? ಅವರಿಗೆ ಮುಸ್ಲಿಂ ಓಟ್ ಬ್ಯಾಂಕ್ ಒಂದೇ ಕಾಣೋದು. ಸಾವರ್ಕರ್ ಅಷ್ಟೇ ಅವರಿಗೆ ಕಾಣೋದು. ಸಾವರ್ಕರ್ ಬ್ರಿಟಿಷ್ ಪರವಾಗಿದ್ರೆ 50 ವರ್ಷ ಕರಿ ನೀರಿನ ಶಿಕ್ಷೆ ಯಾಕೆ ಕೊಟ್ರು.? ನಿಮ್ಮ ನಾಯಕರು ಎಷ್ಟು ವರ್ಷ ಶಿಕ್ಷೆ, ಯಾವ ಶಿಕ್ಷೆ ಅನುಭವಿಸಿದ್ದಾರೆ.? ನೆಹರು 50 ವರ್ಷ ಜೈಲಿಗೆ ಹೋಗಿದ್ರಾ.? ಟಿಪ್ಪುನ ವೈಭವೀಕರಿಸೋದು, ಸಾವರ್ಕರ್ನ ಅವಹೇಳನ ಮಾಡೋದು. ಈ ಡೋಂಗಿತನ ಬಿಡಬೇಕು. ಮೊದಲು ಟಿಪ್ಪು ಜಯಂತಿ ಎಲ್ಲಿ ಬೇಕೋ ಅಲ್ಲಿ ಮಾಡ್ತಿದ್ರು, ಅದಕ್ಕೆ ಯಾರು ಹೋಗಬೇಕಿತ್ತೋ ಹೋಗುತ್ತಿದ್ದರು. ಅದನ್ನ ವೈಭವೀಕರಿಸಲು ಹೋಗಿ ಟಿಪ್ಪೂನೂ ವಿಲನ್ ಮಾಡಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.