ಮಾಧ್ಯಮ ಸಂವಾದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪಾವತಿ ಸುದ್ದಿ ಮೇಲೆ ನಿಗಾ-ಪ್ರತಿ ಜಾಹೀರಾತು ಪೂರ್ವಾನುಮತಿ ಅಗತ್ಯ

ದಾವಣಗೆರೆ: ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ವಸ್ತುನಿಷ್ಠವರದಿಯನ್ನು ನಿರೀಕ್ಷಿಸಲಾಗಿದೆ. ಚುನಾವಣಾ ಸುದ್ದಿಗಳು ವರದಿಮಾಡುವಾಗ ಸಮತೋಲನ ಕಾಪಾಡಿಕೊಲ್ಳಬೇಕು. ಪಾವತಿಗೆ ಸುದ್ದಿ ಬೆಂಬಲಿಸಬಾರದು ಎಂದು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ತಿಳಿಸಿದರು.
ದಾವಣಗೆರೆ ನಗರದ ಪ್ರೆಸ್ ಕ್ಲಬ್ನಲ್ಲಿ  ಶನಿವಾರ  ಜರುಗಿದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವಲ್ಲಿ ಪೇಡ್ ನ್ಯೂಸ್ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪೇಡ್ ನ್ಯೂಸ್ ಪರಿಶೀಲನೆಗೆ, ಜಾಹೀರಾತುಗಳ ಪ್ರಮಾಣೀಕರಣಕ್ಕೆ ಜಿಲ್ಲಾ ಮಟ್ಟದದಲ್ಲಿ ಜಿಲ್ಲಾ ಮಾಧ್ಯಮ  ಮತ್ತು ಕಣ್ಗಾವಲು ಸಮಿತಿಯನ್ನು ರಚಿಸಲಾಗಿದೆ. ಪತ್ರಿಕೆಗಳ ಜಾಹೀರಾತು, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳನ್ನು ಪ್ರತಿ ನಿತ್ಯ ನಿಗಾವಹಿಸುತ್ತಿದೆ ಎಂದರು.
ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳಿಗೆ ಜಿಲ್ಲಾ ಎಂ.ಸಿ.ಎಂ.ಸಿಯಿಂದ  ಪ್ರಮಾಣೀಕರಣ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಹಾಗೂ ಇ- ಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೂ ಪೂರ್ವಾನುಮತಿ ಅಗತ್ಯ. ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಪೂರ್ವಾಮತಿ ಅಗತ್ಯವಿಲ್ಲ. ಆದರೆ ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚಿತವಾಗಿ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಳಿಸಿರು ಜಾಹೀರಾತುಗಳಿಗೆ ಪ್ರಮಾಣೀಕರಣ ಪಡೆಯುವುದು ಅಗತ್ಯವಾಗಿದೆ ಎಂದರು.
ಜಾಹೀರಾತು ವೆಚ್ಚಗಳನ್ನು ಅಭ್ಯರ್ಥಿಗಳ ಚುನಾವಣಾ ಲೆಕ್ಕಕ್ಕೆ ತೋರಿಸಲಾಗುವುದು. ಪೇಡ್ ನ್ಯೂಸ್ ಪ್ರಕಟವಾದರೆ ಅಭ್ಯರ್ಥಿಗಳಿಗೆ ನೋಟೀಸ್ ಜಾರಿಗೊಳಿಸಲಾಗುವುದು. ಪೇಡ್ ನ್ಯೂಸ್ ಖಚಿತಗೊಂಡರೆ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಬಿ.ಆರ್ ರಂಗನಾಥ್ ಕುಳಗಟ್ಟೆ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ, ಇ-ಪೇಪರ್ಗಳಲ್ಲಿ ಪ್ರಕಟವಾಗುವ ಹಾಗೂ ಪ್ರಸಾರವಾಗುವ ಸುದ್ದಿಗಳು ಹಾಗೂ ಜಾಹೀರಾತುಗಳನ್ನು ಪ್ರತಿನಿತ್ಯ ಎಂ.ಸಿ.ಎಂ.ಸಿ. ಸಮಿತಿ ನಿಗಾವಹಿಸಿ ಪರಿಶೀಲನೆ ನಡೆಸುತ್ತದೆ. ಪೇಡ್ ನ್ಯೂಸ್ (ಕಾಸಿಗಾಗಿ ಸುದ್ದಿ) ಎಂದು ಕಂಡುಬಂದರೆ ಹಾಗೂ ಅನಧಿಕೃತ ಜಾಹೀರಾತು ಪ್ರಕಟಗೊಂಡರೆ ಚುನಾವಣಾಧಿಕಾರಿಗಳ ಮೂಲಕ ಸಂಬಂಧಿಸಿದ ಅಭ್ಯರ್ಥಿಗಳಿಗೆ ನೋಟೀಸ್ ಜಾರಿಮಾಡಿ ವಿವರ  ಪಡೆಯಲಾಗುತ್ತದೆ. ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುತ್ತದೆ. ಪೇಡ್ ನ್ಯೂಸ್  ಅಥವಾ ಜಾಹೀರಾತುಗಳ ಎಲ್ಲ ವೆಚ್ಚವು ವಾರ್ತಾ ಇಲಾಖೆ ಇಲಾಖೆ ಜಾಹೀರಾತು ದರದಂತೆ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುತ್ತದೆ ಎಂದರು.
ವಿದ್ಯುನ್ಮಾನ, ಸಾಮಾಜಿಕ ಜಾಲತಾಣಗಳು, ರೇಡಿಯೋ, ಇ-ಪತ್ರಿಕೆಗಲ್ಲಿ  ಹಾಗೂ ಎಸ್.ಎಂ.ಎಸ್.ಸಂದೇಶ ಬಿತ್ತರಿಸಲು  ಪೂರ್ವಾಮತಿ ಕಡ್ಡಾಯ. ಪ್ರತಿ ದಿನ ಪ್ರಕಟವಾಗುವ ಜಾಹೀರಾತುಗಗಳಿಗೆ ಹಾಗೂ ಮತದಾನ ದಿನದ ಹಾಗೂ ಹಿಂದಿನ ದಿನ ಪ್ರಕಟವಾಗುವ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಅವಶ್ಯವಾಗಿದೆ ಎಂದರು.
ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರ, ಕಾರ್ಯಕ್ರಮದಲ್ಲಿ ವಿಡಿಯೋ ಬಿತ್ತರ, ಧ್ವವರ್ಧಕ ಮೂಲಕ ಪ್ರಸಾರವಾಗುವ ಆಡಿಯೋಗಳಿಗೆ ಹಾಗೂ ಎಸ್.ಎಂ.ಎಸ್. ಕಂಟೆಂಟ್ಗಳ ಕುರಿತಂತೆ ಪೂರ್ವಾನುಮತಿ ಪಡೆಯಲು ನಿಗದಿತ ಅರ್ಜಿ ನಮೂನೆಯಲ್ಲಿ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಮಾಧ್ಯಮ ಪ್ರಮಾಣೀಕರಣ ಸಮಿತಿಗೆ  ಸಲ್ಲಿಸಬೇಕು. ಅರ್ಜಿಯೊಂದಿಗೆ ಪ್ರಸಾರ ಮಾಡಲು ಉದ್ದೇಶಿದಿ ವಿಡಿಯೋ, ಆಡಿಯೋ ಪ್ರತಿ ಹಾಗೂ ಅದರ ಸ್ಕ್ರೀಪ್ಟ್ ಸಹ ಸಲ್ಲಿಸಬೇಕು. ಸಮಿತಿಯು ಪರಿಶೀಲನೆಮಾಡಿ ಅನುಮತಿ ನೀಡುತ್ತದೆ. ಒಂದೊಮ್ಮೆ ಪ್ರಸಾರಕ್ಕೆ ಯೋಗ್ಯವಲ್ಲದಿದ್ದೆರೆ ಸಮಿತಿಯ ಸಲಹೆ ಮೇರೆಗೆ  ಮರು ಪರಿಷ್ಕರಣೆ ಮಾಡಿ ಅನುಮತಿಗೆ ಸಲ್ಲಿಸಬೇಕಾಗುತ್ತದೆ ಎಂದರು..
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯವಾಗಿದೆ. ಚುನಾವಣಾ ಆಯೋಗ ಸಾಮಾಜಿಕ ಜಾಲತಾಣಗಳ ನಿರ್ವಹಣೆ, ಪ್ರಸಾರ ಕುರಿತಂತೆ ಹೊರಡಿಸಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ಸಂವಾದಲ್ಲಿ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷರಾದ ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಸಿ.ವರದರಾಜ್, ಖಜಾಂಚಿ ಮಧುನಾಗರಾಜ ಕುಂದವಾಡ, ಮತ್ತು ಜಿಲ್ಲಾ ಮಟ್ಟದ ವರದಿಗಾರರು ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      