ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ: ಜನರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಸಹಕಾರಿ – ಡಿಸಿ ಶಿವಾನಂದ ಕಾಪಾಶಿ

ದಾವಣಗೆರೆ: ಜನರೊಂದಿಗೆ ನೇರವಾಗಿ ಸಂವಾದ ನಡೆಸಿ, ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಹೇಳಿದರು.

ಶನಿವಾರ  ಬೀರಗೊಂಡನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಸುಗಮವಾಗಿ ಆಡಳಿತ ನಡೆಸಲು ಈ ಕಾರ್ಯಕ್ರಮವು ಉತ್ತಮವಾದ ವೇದಿಕೆಯಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಮಾಹಿತಿ ಒದಗಿಸಲು ಸಹಕಾರಿಯಾಗಿದೆ. ಜನರ ಸೇವೆ ಮಾಡುವ ಮೂಲಕ ಸರ್ಕಾರ ಮತ್ತು ಅಧಿಕಾರಿಗಳಿಗೆ ಉತ್ತಮ ಹೆಸರು ತಂದುಕೊಡುವ ಕಾರ್ಯಕ್ರಮ ಇದಾಗಿದೆ.
ಆಧುನಿಕ ದಿನಗಳಲ್ಲಿ ದೇಶದಲ್ಲಿ ಅನೇಕ ರೀತಿಯ ದವಸ-ಧಾನ್ಯಗಳನ್ನು ಉತ್ಪಾದಿಸಲಾಗುತ್ತಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರೈತರ ಪಾತ್ರ ಮಹತ್ವದ್ದಾಗಿದೆ  ಎಂದು ಹೇಳಿದರು.


ಮಂಜೂರಾದ ವಿವಿಧ ಯೋಜನೆಗಳ ಸೌಲಭ್ಯಗಳ ವಿವರ : ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಪ್ಯ ವೇತನ 28, ಸಂಧ್ಯಾ ಸುರಕ್ಷಾ ಯೋಜನೆ 6, ನಿರ್ಗತಿಕ ವಿಧವಾ ವೇತನ 3, ಅಂಗವಿಕಲ ಘೋಷಣಾ ವೇತನ 1, ಮನಸ್ವಿನಿ 3 ಸೇರಿದಂತೆ ಒಟ್ಟು 41 ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ವಿವಿಧ ಸವಲತ್ತು ವಿತರಿಸಲಾಯಿತು.
ಇದೇ ವೇಳೆ  04 ಪೌತಿಕಾತೆ ಬದಲಾವಣೆ ಮಾಡಲಾಯಿತು 13,ಬಗರ್ ಹುಕ್ಕುಂ ಸಾಗುವಳಿ ಚೀಟಿ ಮಂಜೂರಾತಿ ಸಂಖ್ಯೆ ನೀಡಲಾಯಿತು. 48 ಆಧಾರ್ ಕಾರ್ಡ ತಿದ್ದುಪಡಿ ಮಾಡಲಾಗಿದ್ದು, ಈ ಎಲ್ಲಾ ಸೌಲಭ್ಯಗಳನ್ನು ಇದೇ ವೇಳೆ ಮಂಜೂರು ಮಾಡಲಾಯಿತು.
ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಹಿಂದೆ ಜನಸಾಮಾನ್ಯರು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರನ್ನು ಭೇಟಿಯಾಗಲು ಅಲೆದಾಡಬೇಕಿತ್ತು, ಜೊತೆಗೆ ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿತ್ತು, ಈ ರೀತಿ ಅಲೆದಾಟಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ವಿವಿಧ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಇಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ರೂಪಿಸಿದೆ ಎಂದರು.
ಕ್ಷೇತ್ರದಾದ್ಯಂತ ಕುಡಿಯುವ ನೀರು, ಸಿಮೆಂಟ್ ರಸ್ತೆ, ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಅನುದಾನ ಮಂಜೂರು ಮಾಡಲಾಗಿದೆ. ಚುನಾಯಿತ ಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.


ಜನರು ಇ-ಸ್ವತ್ತು ಪಡೆಯಲು ಆಗುತ್ತಿರುವ ತಾಂತ್ರಿಕ ತೊಂದರೆಯನ್ನು ನನ್ನ ಗಮನಕ್ಕೆ ತಂದಿದ್ದು, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರೊಂದಿಗೆ ಚರ್ಚಿಸಲಾಗುವುದು ಜೊತೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಇ-ಸ್ವತ್ತಿನ ಸಮಸ್ಯೆಯ ಕುರಿತು ಮಾತನಾಡಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಹಾಗೂ ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ಪ್ರಮಾಣಪತ್ರಗಳು ಮತ್ತು ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಹೆಚ್‍ಓ ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಹಾಗೂ ಗ್ರಾಪಂ ಅಧ್ಯಕ್ಷರಾದ ಕವಿತಾ ರಮೇಶ್ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!