ಜಿಲ್ಲಾಧಿಕಾರಿಗಳ ನಡೆ- ಹಳ್ಳಿಯ ಕಡೆ : ಗ್ರಾಮವಾಸ್ತವ್ಯ ಗ್ರಾಮ ಒನ್ ಅನುಷ್ಠಾನದಲ್ಲಿ ಜಿಲ್ಲೆ ಪ್ರಥಮ, ಸಾರ್ವಜನಿಕ ಒತ್ತುವರಿ ತೆರವು ಮಾಡಿ : ಜಿಲ್ಲಾಧಿಕಾರಿ
ದಾವಣಗೆರೆ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸ್ಮಶಾನ, ಗೋಮಾಳ, ಕೆರೆ ಮುಂತಾದ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಜನರು ಸ್ವಯಂ ಪ್ರೇರಿತವಾಗಿ ಒತ್ತುವರಿ ಭೂಮಿ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ಭೂ ಒತ್ತುವರಿ ಕಾಯ್ದೆಯಡಿ ತೆರವುಗೊಳಿಸಿ, ಒತ್ತುವರಿ ಮಾಡಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹರಿಹರ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಕೊಕ್ಕನೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ಸರ್ಕಾರ ಜನರ ಮನೆಬಾಗಿಲಿಗೆ ಬರಬೇಕು ಎಂಬ ಉದ್ದೇಶದಿಂದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಯಾವುದೇ ಏಜೆಂಟರು, ಮಧ್ಯವರ್ತಿಗಳು, ಲೂಟಿಕೋರರ ಹಾವಳಿ ಇಲ್ಲದೆ ಜನರಿಗೆ ಸರ್ಕಾರದ ವಿವಿಧ ಸೇವೆ ಒದಗಿಸುವ ಸಲುವಾಗಿ ಅಧಿಕಾರಿಗಳ ತಂಡ ಭೇಟಿ ನೀಡಿ ಎಲ್ಲಾ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ನೇರವಾಗಿ ಪರಿಹಾರ ದೊರಕಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಗ್ರಾಮ ಒನ್ ನೂತನ ಯೋಜನೆ ಅನುಷ್ಠಾನದಲ್ಲಿ ದಾವಣಗೆರೆ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದರು.
ಒಂದು ಗ್ರಾಮಕ್ಕೆ ಮುಖ್ಯವಾಗಿ ಸ್ಮಶಾನವಿರಬೇಕು ಆದರೆ ಸರ್ಕಾರಿ ದಾಖಲೆಯ ಕಾಗದ ಪತ್ರದಲ್ಲಿ ಮಾತ್ರ ಸ್ಮಶಾನ ದಾಖಲಾಗಿರುತ್ತದೆ. ವಾಸ್ತವವಾಗಿ ಎಷ್ಟೋ ಹಳ್ಳಿಗಳಲ್ಲಿ ಸ್ಮಶಾನಗಳು ಒತ್ತುವರಿಯಾಗಿರುವುದು ಕಂಡು ಬಂದಿದೆ. ಆದ್ದರಿಂದ ಒತ್ತುವರಿಯಾದ ಸ್ಮಶಾನ, ಗೋಮಾಳ, ಕೆರೆಗಳನ್ನು ಜನರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ 198(ಎ) ಭೂ ಒತ್ತುವರಿ ಕಾಯ್ದೆಯಡಿ ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಿ ಒತ್ತುವರಿ ಮಾಡಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ತಂಡವು ಬಿಪಿಎಲ್, ಪಹಣಿ ಲೋಪದೋಷ, ಪೌತಿಖಾತೆ ಸಮಸ್ಯೆಗಳನ್ನು ನೇರವಾಗಿ ಜನರ ಮನೆಬಾಗಿಲಿಗೆ ಬಂದು ಅರ್ಜಿ ಪಡೆದು ಸಮಸ್ಯೆ ಆಲಿಸಿ ಪರಿಹಾರ ದೊರಕಿಸಿಕೊಡಲು ಸಿದ್ಧವಾಗಿದೆ. ಗ್ರಾಮಮಟ್ಟದ ಅಧಿಕಾರಿ ವರ್ಗ ಜನರಿಗೆ ನೀಡುವ ಕಿರುಕುಳ ತಪ್ಪಿಸಿ, ಸರ್ಕಾರಿ ಯೋಜನೆಗಳ ಪ್ರಮಾಣಪತ್ರಗಳನ್ನು ಸ್ಥಳದಲ್ಲಿಯೇ ಅರ್ಜಿ ಪಡೆದು, ಸೌಲಭ್ಯ ಕಲ್ಪಿಸಿ, ಅಲ್ಲಿಯೇ ಪ್ರಮಾಣಪತ್ರ ವಿತರಿಸುವ ದಾವಣಗೆರೆ ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳು ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿವೆ ಎಂದರು.
ಕೊಕ್ಕನೂರು ಗ್ರಾಮದಲ್ಲಿ ಏರ್ಪಡಿಸಲಾದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮುಖಾಂತರ ಸ್ಥಳದಲ್ಲಿಯೇ 16 ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, 03 ಜನರಿಗೆ ಸಂಧ್ಯಾಸುರಕ್ಷಾ ವೇತನ, 12 ಜನರಿಗೆ ವಿಧವಾ ವೇತನ, 01 ಫಲಾನುಭವಿಗೆ ಮನಸ್ವಿನಿ ಯೋಜನೆ ಪ್ರಮಾಣ ಪತ್ರ ಹಾಗೂ 02 ಜನ ಅಂಗವಿಕಲರಿಗೆ ವಿಲ್‍ಚೇರ್ ಮತ್ತು 46 ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ, 21 ಜನರಿಗೆ ಬಿಪಿಎಲ್ ಕಾರ್ಡ್ ವಿತರಣೆ, 7 ಜನರಿಗೆ ಭೂ ಸಮೀಕ್ಷೆ ನಕ್ಷೆ ಪತ್ರ ವಿತರಣೆ ಒಳಗೊಂಡಂತೆ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಇದೇ ರೀತಿ ಜಿಲ್ಲೆಯಲ್ಲಿ ಏರ್ಪಡಿಸಲಾಗುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜೊತೆಗೆ ಇಡೀ ಜಿಲ್ಲೆಯನ್ನು ಸುತ್ತಾಡಿ ಕಾರ್ಯ ನಿರ್ವಹಣೆ ಮಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ. ಹಳ್ಳಿಗಳು ಭಾರತ ದೇಶದ ಆತ್ಮ. ಹಳ್ಳಿಗಳ ಅಭಿವೃದ್ಧಿಯಿಂದ ಗಾಂಧೀಜಿಯವರ ಕನಸಿನ ಗ್ರಾಮಸ್ವರಾಜ್ ನಿರ್ಮಾಣದ ಆಶಯ ಹೊಂದಿ ಸಂವಿಧಾನದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಅವಕಾಶ ನೀಡಲಾಗಿದೆ. ಹಾಗಾಗಿ ಸಂವಿಧಾನದಲ್ಲಿ 73 ಮತ್ತು 74ನೇ ತಿದ್ದುಪಡಿ ಮಾಡಿ ಅಧಿಕಾರ ವಿಕೇಂದ್ರಿಕರಣ ಮಾಡುವ ಮೂಲಕ ಗ್ರಾಮ ಮಟ್ಟದಿಂದ ತಾಲ್ಲೂಕು, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳನ್ನು ಆರಂಭಿಸಿ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಕೆಲಸ, ಅಧಿಕಾರ, ಹಣಕಾಸು ಮೂರನ್ನೂ ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ಜೀವನೋಪಾಯ ಮಿಷನ್‍ನಂತಹ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ನರೇಗಾ ಯೋಜನೆಯ ಮೂಲಕ ರೇಷ್ಮೆ ಬೆಳೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಗ್ರಾಮೀಣ ಜನರು ಪಡೆಯಬಹುದಾಗಿದೆ. ಜಲಜೀವನ್ ಮಿಷನ್ ಯೋಜನೆಯ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡಲಾಗುವುದು. ವಸತಿ ರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡ ಮಹಿಳೆಯರ ಕಲ್ಯಾಣಕ್ಕಾಗಿ 43 ಸ್ವ-ಸಹಾಯ ಸಂಘಗಳಿಗೆ ಪ್ರೋತ್ಸಾಹ ಧನ ಬಿಡುಗಡೆಗೊಳಿಸಿದೆ. ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ, ಪ್ರತಿಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿ ಘನತ್ಯಾಜ್ಯ ವಿಲೇವಾರಿ ಮಾಡಲು ವಾಹನ ಒದಗಿಸಲಾಗುತ್ತಿದೆ. ಅಮೃತ ಗ್ರಾಮ ಯೋಜನೆಗೆ ಕೊಕ್ಕನೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಂಥಾಲಯ, ಆಸ್ಪತ್ರೆ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹರಿಹರ ತಹಶೀಲ್ದಾರ್ ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಹಳ್ಳಿಗಳಿಂದ ಕೂಡಿದ ದೇಶ ಆದರೆ ಹಳ್ಳಿಗಳಿಗೆ ಸರ್ಕಾರದ ಯೋಜನೆಗಳು ತಲುಪುವಲ್ಲಿ ವಿಳಂಬವಾಗುತ್ತಿದೆ. ಆ ಕಾರಣಕ್ಕಾಗಿ ಪ್ರತಿ ತಿಂಗಳ ಮೂರನೇ ಶನಿವಾರ ಒಂದೊಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಆಯಾ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಇದರಿಂದ ಅನೇಕ ಬಾರಿ ಕಚೇರಿಗಳಿಗೆ ಅಲೆದಾಡಿದರೂ ಪಡೆಯಲಾಗದ ಸೌಲಭ್ಯಗಳನ್ನು ಗ್ರಾಮವಾಸ್ತವ್ಯ ಕಾರ್ಯಕ್ರಮದ ಮೂಲಕ ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಗ್ರಾಮಗಳಲ್ಲಿರುವ ಅನೇಕ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಪರಿಹಾರ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ ಸೇರಿದಂತೆ ಜಿಲ್ಲಾಡಳಿತದ ತಂಡಕ್ಕೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಗ್ರಾಮಕ್ಕೆ ಅದ್ದೂರಿ ಸ್ವಾಗತ ಕೋರಿದರು. ಜೊತೆಗೆ ಎತ್ತಿನಬಂಡಿಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಏರ್ಪಡಿಸಲಾಯಿತು. ಕಾರ್ಯಕ್ರಮದ ವೇದಿಕೆಯ ಪಕ್ಕದಲ್ಲಿ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ಕೊಕ್ಕನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗನಗೌಡ್ರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.