ಜಿಲ್ಲಾ ವರದಿಗಾರರ ಕೂಟದಿಂದ ಜಯಂತ್ಗೆ ಶ್ರದ್ಧಾಂಜಲಿ
ದಾವಣಗೆರೆ: ದಶಕಗಳ ಕಾಲ ವಿವಿಧ ಸುದ್ದಿವಾಹಿನಿಗಳಲ್ಲಿ ಕ್ಯಾಮೆರಾಮೆನ್ ಆಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ಅನಾರೋಗ್ಯದಿಂದ ಮರಣಹೊಂದಿದ ಸಿ.ಎಂ. ಜಯಂತ್ ಅವರಿಗೆ ಗುರುವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಮಾತನಾಡಿ, ಜಯಂತ್ ಅವರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು. ಕೇವಲ 33 ವರ್ಷಕ್ಕೆ ಅವರು ಅಕಾಲಿಕ ಮರಣ ಹೊಂದಿರುವುದು ನೋವುಂಟು ಮಾಡಿದೆ ಎಂದು ವಿಷಾದಿಸಿದರು.
ನಿಕಟಪೂರ್ವ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಮಾತನಾಡಿ, ಒತ್ತಡದ ಬದುಕಲ್ಲಿ ಪತ್ರಕರ್ತರು ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಒಮ್ಮೆ ಆರೋಗ್ಯ ಕಳೆದುಕೊಂಡರೆ ಅದು ಮರಳಿ ಸಿಗುವುದಿಲ್ಲ. ಆದ್ದರಿಂದ ಆರೋಗ್ಯಕ್ಕೆ ಪ್ರಥಮಾದ್ಯತೆ ನೀಡಿ ಕಾರ್ಯನಿರ್ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್ ಮಾತನಾಡಿ, ಪ್ರಸ್ತುತ ಪತ್ರಕರ್ತರು ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಿರುವ ಅನಿವಾರ್ಯತೆ ಇದೆ. ಇದರಿಂದಾಗಿ, ಆರೋಗ್ಯದ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಪತ್ರಕರ್ತರಿಗೆ ಆರೋಗ್ಯ ವಿಮೆಯಂತಹ ಸೌಲಭ್ಯ ಕಲ್ಪಿಸಿಕೊಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುನಾಥ್ ಕಾಡಜ್ಜಿ, ಖಜಾಂಚಿ ಮಧುನಾಗರಾಜ್, ಸದಸ್ಯರಾದ ಆರ್. ರವಿ, ರಂಗನಾಥ್ ರಾವ್, ಸುರೇಶ್ ಕುಣಿಬೆಳಕೆರೆ, ದೇವಿಕಾ, ತೇಜಸ್ವಿನಿ, ಕಾವ್ಯ ಬಿ.ಕೆ., ಎ.ಪಿ. ಸಂಜಯ್, ಹನುಮಂತ್, ಫಕೃದ್ದೀನ್, ಕಿರಣ್ ಕುಮಾರ್ ಎಸ್., ರಾಮಪ್ಪ, ಶಿವರಾಜ್, ನಿಂಗರಾಜ್, ಪರಶುರಾಮ್, ಬಿ.ಬಿ. ಮಲ್ಲೇಶ್, ಹೆಚ್.ಎನ್. ಪ್ರಕಾಶ್, ಯೋಗರಾಜ್, ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.