ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಮಾಹಿತಿ ಜಿಲ್ಲಾಸ್ಪತ್ರೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಫಾಸ್ಟ್ ಟ್ರ್ಯಾಕ್ ಒಪಿಡಿ ಸೌಲಭ್ಯ

ಡಾ.ಆರ್.ರಂಗನಾಥ್

ಚಿತ್ರದುರ್ಗ :ಚಿತ್ರದುರ್ಗ ಜಿಲ್ಲಾಸ್ಪತ್ರೆ ಹಾಗೂ ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ “ಫಾಸ್ಟ್ ಟ್ರ್ಯಾಕ್ ಒಪಿಡಿ ರಿಜಿಸ್ಟ್ರೇಷನ್ ಸೌಲಭ್ಯ” ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.
ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಫಾಸ್ಟ್ ಟ್ರ್ಯಾಕ್ ಒಪಿಡಿ ಸೌಲಭ್ಯ ವೀಕ್ಷಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲಾಸ್ಪತ್ರೆ ಮತ್ತು ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಫಾಸ್ಟ್ ಟ್ರ್ಯಾಕ್ ಒಪಿಡಿ ಕೌಂಟರ್ ತೆರೆಯಲಾಗಿದ್ದು, ಸದ್ಯದಲ್ಲಿಯೇ ಮೊಳಕಾಲ್ಮುರು, ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆರಂಭಿಸಲಾಗುವುದು. ಈ ಸೌಲಭ್ಯದಿಂದ ತುರ್ತಾಗಿ ಒಪಿಡಿ ಚೀಟಿ ಪಡೆಯಬಹುದು ಎಂದು ಹೇಳಿದರು.
ಆಯುಷಾ್ಮನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ವತಿಯಿಂದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‍ಎಚ್‍ಎ) ಇ–ಹಾಸ್ಪಿಟಲ್ ಸಹಯೋಗದಲ್ಲಿ ಫಾಸ್ಟ್ ಟ್ರ್ಯಾಕ್ ಒಪಿಡಿ ಸೌಲಭ್ಯ ಕಲ್ಪಿಸಿರುವುದರಿಂದ ಹೊರರೋಗಿ ವಿಭಾಗದಲ್ಲಿ ವೈದ್ಯಕೀಯ ಸೇವೆ ಪಡೆಯಲು ಇನ್ನು ಮುಂದೆ ರೋಗಿಗಳು ಸರದಿಯಲ್ಲಿ ನಿಂತು ನೋಂದಣಿ ಚೀಟಿ ಪಡೆಯುವುದು ತಪ್ಪಲಿದೆ. ಫಾಸ್ಟ್ ಟ್ರ್ಯಾಕ್ ಕೌಂಟರ್‍ನಲ್ಲಿ ಕ್ಯೂಆರ್ ಕೋಡ್ ಅನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ತಕ್ಷಣವೇ ಒಪಿಡಿ ಟೋಕನ್ ನಂಬರ್ ಲಭ್ಯವಾಗಲಿದೆ ಎಂದರು.
ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ನೋಂದಣಿ ಚೀಟಿ ಪಡೆಯುವುದು ಕಡ್ಡಾಯವಾಗಿದ್ದು, ಈ ನೋಂದಣಿ ಚೀಟಿ ಪಡೆಯಲು ರೋಗಿಗಳು ಸರದಿಯಲ್ಲಿ ನಿಲ್ಲಬೇಕಿತ್ತು. ಇದರಿಂದ ತುರ್ತಾಗಿ ವೈದ್ಯರನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ ಜೊತೆಗೆ ನೋಂದಣಿ ಚೀಟಿ ಮಾಡಿಸುವಾಗ ರೋಗಿಯ ಹೆಸರು, ತಂದೆಯ ಹೆಸರು, ಲಿಂಗ, ವಯಸ್ಸು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೇಳಿದ ನಂತರ ಹೊರರೋಗಿ ವಿಭಾಗದ ಚೀಟಿಯನ್ನು ಕೊಡುತ್ತಿದ್ದರು. ಈ ಪ್ರಕ್ರಿಯೆಗೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಫಾಸ್ಟ್ ಟ್ರ್ಯಾಕ್ ಒಪಿಡಿ ಸೌಲಭ್ಯ ಕಲ್ಪಿಸಿರುವುದರಿಂದ ತ್ವರಿತವಾಗಿ ಒಪಿಡಿ ಟೋಕನ್ ಪಡೆಯಬಹುದಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ: ಫಾಸ್ಟ್ ಟ್ರ್ಯಾಕ್ ಒಪಿಡಿ ಸೌಲಭ್ಯದ ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿ ಇಲ್ಲದ ಕಾರಣ ಇಂದಿಗೂ ಅನೇಕ ಮಂದಿ ಸರದಿಯಲ್ಲಿ ನಿಂತೇ ಒಪಿಡಿ ಚೀಟಿ ಪಡೆಯುತ್ತಿದ್ದಾರೆ. ಸಂಬಂಧಿಸಿದ ಸಿಬ್ಬಂದಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಇದರ ಬಗ್ಗೆ ಮಾಹಿತಿ ಶಿಕ್ಷಣ ನೀಡಲು ಸಾರ್ವಜನಿಕ ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಿದರು.
ಇಕಾ ಕೇರ್/ಎಬಿಎಚ್‍ಎ ಆ್ಯಪ್: ‘ಮೊಬೈಲ್‍ನ ಪ್ಲೇ ಸ್ಟೋರ್‍ನಲ್ಲಿ ಇಕಾ ಕೇರ್ (Eka care app) ಅಥವಾ ಎಬಿಎಚ್‍ಎ (ABHA app) ಆ್ಯಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸವನ್ನು ನಮೂದಿಸಬೇಕು. ನಂತರ ಎಬಿಎಚ್‍ಎ ಸಿದ್ಧವಾಗುತ್ತದೆ. ಅಲ್ಲಿ ಕುಟುಂಬದ ಇತರ ಸದಸ್ಯರ ಹೆಸರು ಮತ್ತು ವಿವರ ನಮೂದಿಸಬಹುದು. ನಂತರ ವೈದ್ಯರಿಗೆ ತೋರಿಸಿಕೊಳ್ಳಬೇಕಾದ ದಿನ ಜಿಲ್ಲಾಸ್ಪತ್ರೆಯ ಫಾಸ್ಟ್ ಟ್ರ್ಯಾಕ್ ಒಪಿಡಿ ಕೌಂಟರ್‍ಗೆ ಬಂದು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕು, ತಕ್ಷಣವೇ ಟೋಕನ್ ನಂಬರ್ ದೊರೆಯುತ್ತದೆ’ ಎನ್ನುತ್ತಾರೆ ಇ–ಆಸ್ಪತ್ರೆ ಜಿಲ್ಲಾ ಸಂಯೋಜಕ ತಿಪ್ಪೇಸ್ವಾಮಿ.
‘ಕೌಂಟರ್‍ನಲ್ಲಿರುವ ಸಿಬ್ಬಂದಿ ಟೋಕನ್ ನಂಬರ್ ಜೊತೆಗೆ ತೋರಿಸಿಕೊಳ್ಳಬೇಕಾದ ವಿಭಾಗ ಮತ್ತು ವೈದ್ಯರ ಹೆಸರು ನಮೂದಿಸಿ ಚೀಟಿ ಕೊಡುತ್ತಾರೆ. ಕೌಂಟರ್ ಮುಂಭಾಗ ಇರುವ ಪರದೆಯಲ್ಲಿ ರೋಗಿಯ ವಿವರ ಪ್ರದರ್ಶನವಾಗುತ್ತದೆ. ಕೌಂಟರ್‍ನಲ್ಲಿ ಕಂಪ್ಯೂಟರ್, ಪ್ರಿಂಟರ್ ಸೌಲಭ್ಯವಿದೆ’ ಎಂದು ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್, ಇ-ಆಸ್ಪತ್ರೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಇದ್ದರು.

Leave a Reply

Your email address will not be published. Required fields are marked *

error: Content is protected !!