ಜಿಲ್ಲಾ ಮಟ್ಟದ ಉದ್ಯೋಗಮೇಳ ಉದ್ಯೋಗ ಪಡೆಯಲು ಕೌಶಲ್ಯ ಮತ್ತು ವೃತ್ತಿ ನೈಪುಣ್ಯತೆ ಅತ್ಯವಶ್ಯ- ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ: ಆಧುನಿಕ ಯುಗದಲ್ಲಿ ಉದ್ಯೋಗ ಪಡೆಯಲು ಪದವಿ ಜೊತೆಗೆ ಔದ್ಯೋಗಿಕ ಕ್ಷೇತ್ರಕ್ಕೆ ಅಗತ್ಯವಾದ ಕೌಶಲ್ಯ ಮತ್ತು ವೃತ್ತಿ ನೈಪುಣ್ಯತೆ ಅತ್ಯವಶ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗಮೇಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ನೈಪುಣ್ಯತೆ ಹಾಗೂ ತಂತ್ರಜ್ಞಾನ ಮೈಗೂಡಿಸಿಕೊಂಡು ಅಪ್‍ಡೇಟ್ ಆಗಬೇಕು. ದಿನೇ ದಿನೇ ಜ್ಞಾನ, ಕೌಶಲ್ಯ ಹೆಚ್ಚಾಗಬೇಕು, ಅಂದಾಗ ಮಾತ್ರ ಉದ್ಯೋಗ ಪಡೆಯಲು ಸಾಧ್ಯ ಎಂದರು.
ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯುವುದು ಕಷ್ಟ, ಪ್ರತಿ ಕೆಲಸವು ಮುಖ್ಯವಾಗಿದೆ. ಕೆಲಸ ದೊಡ್ಡದು, ಸಣ್ಣದು ಎನ್ನದೆ, ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದಾಗ ಯಶಸ್ಸು ಕಾಣಲು ಸಾಧ್ಯ. ಇಂದಿನ ಔದ್ಯೋಗಿಕ ಕ್ಷೇತ್ರ ಬದಲಾಗಿದ್ದು, ಕೇವಲ ಪದವಿಗಳಿಂದ ಉದ್ಯೋಗ ದೊರೆಯುವುದು ಕಷ್ಟ. ಇಂದಿನ ಯುವಜನತೆ ಬಹಳಷ್ಟು ಬುದ್ದಿವಂತರು, ನಮ್ಮ ದೇಶದ ಅರ್ಥ ವ್ಯವಸ್ಥೆಯನ್ನು ಉತ್ತುಂಗಕ್ಕೆ ತರುವಂತಹ ಸಾಮಥ್ರ್ಯ ಅವರಿಗಿದೆ. ಇಂತಹ ಯುವಜನತೆ ಭವಿಷ್ಯದಲ್ಲಿ ತಮ್ಮ ಕುಟುಂಬದ ಹಾಗೂ ದೇಶದ ಆಧಾರಸ್ತಂಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಯುವಜನತೆ ದೇಶದ ಆಸ್ತಿಯಾಗಿದ್ದು, ಅವರಿಗೆ ವೃತ್ತಿ ಕೌಶಲ್ಯದ ತರಬೇತಿ ನೀಡಿ, ಉದ್ಯೋಗಕ್ಕೆ ಅಣಿಯಾಗುವಂತೆ ಮಾಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ಭವಿಷ್ಯದಲ್ಲಿ ಯುವಜನಾಂಗ ಹೆಚ್ಚು ಹೆಚ್ಚು ಉದ್ಯೋಗ ಪಡೆಯಲು ಸಾಧ್ಯವಾಗಲಿದೆ ಎಂದರು
ಉದ್ಯೋಗಮೇಳದಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ ಆನ್‍ಲೈನ್‍ನಲ್ಲಿ ನೊಂದಣಿ ಹಾಗೂ ನೇರವಾಗಿ ಮೇಳದಲ್ಲಿ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.