ಅಗತ್ಯವಿರುವವರಿಗೆ ಮಾತ್ರ ಕೋವಿಡ್ ಪರೀಕ್ಷೆ ನಡೆಸಿ, ಅನಗತ್ಯ ಪರೀಕ್ಷೆ ಮಾಡಿದ್ರೆ ಯಾರು ಹೊಣೆ ಗೊತ್ತಾ..? ಇದನ್ನ ಹೇಳಿದ್ದು ಯಾರು..?
ಹೆಚ್ ಎಂ ಪಿ ಕುಮಾರ್.
ದಾವಣಗೆರೆ:ಜಿಲ್ಲೆಗಳಲ್ಲಿ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕೋವಿಡ್ ಪರೀಕ್ಷೆ ಮಾಡಲು ಇರುವ 36 ತಂಡಗಳನ್ನು ಸಮರ್ಪಕವಾಗಿ ಬಳಸಿಕೊಂಡು ಎಸ್ ಎ ಆರ್ ಐ (SARI) ಮತ್ತು ಐಎಲ್‍ಐ (ILI) ಪ್ರಕರಣಗಳು ಹಾಗೂ ಸೋಂಕಿತರ ಮನೆಯವರಿಗೆ ಮಾತ್ರ ಪರೀಕ್ಷೆ ಮಾಡಬೇಕು. ಉಳಿದಂತೆ ಬೇರೆಯವರಿಗೆ ಅನಗತ್ಯ ಪರೀಕ್ಷೆ ಮಾಡಿದ್ದು ಗಮನಕ್ಕೆ ಬಂದರೆ ಅದಕ್ಕೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ನೇರ ಹೊಣೆಯಾಗಲಿದ್ದು, ಅವರಿಂದ ಹಣ ವಸೂಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಬರುತ್ತಿದ್ದು, ದಿನಕ್ಕೆ ಇಷ್ಟೇ ಜನ ಎಂದು ಸೀಮಿತಗೊಳಿಸಿ, ಯೋಜನೆ ರೂಪಿಸಿಕೊಂಡು ಲಸಿಕೆ ನೀಡಬೇಕು.
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ, ರೆಮಿಡೆಸಿವರ್ ಸೇರಿದಂತೆ ಇತರೆ ಔಷಧಿಗಳು ಮತ್ತು ಆಕ್ಸಿಜನ್, ಬೆಡ್ ವ್ಯವಸ್ಥೆಗಳಿದ್ದು ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಿಲ್ಲೆಯ ಹೊರಭಾಗದಿಂದ ಬಂದವರಿಗೆ ಕೋವಿಡ್ ಲಕ್ಷಣವಿದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿ ಫಲಿತಾಂಶ ಬರುವವರೆಗೆ ಅವರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು.
ಸೋಂಕಿತರ ಮನೆಗಳಲ್ಲಿ ಉತ್ತಮ ವ್ಯವಸ್ಥೆ ಇದ್ದರೆ ಮನೆಗಳಲ್ಲೆ ಕ್ವಾರಂಟೈನ್ ಮಾಡಿ. ಉಳಿದಂತೆ ಹೋಂ ಐಸೊಲೇಶನ್ ಮಾಡಲು ಸೂಕ್ತ ವಾತಾವರಣ ಇಲ್ಲದ ಪಕ್ಷದಲ್ಲಿ ಅಂತಹವರನ್ನು ಕೋವಿಡ್ ಸೆಂಟರ್‍ಗೆ ಕರೆ ತಂದು ಚಿಕಿತ್ಸೆ ನೀಡಬೇಕಾಗಿರುವುದು ಆರೋಗ್ಯ ಇಲಾಖೆ ಜವಾಬ್ದಾರಿಯಾಗಿದೆ. ಹಾಗೂ ಅತ್ಯಾವಶ್ಯಕ ಔಷಧಿಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ತಕ್ಷಣಕ್ಕೆ ಈ ಎಲ್ಲ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಜೊತೆಗೆ ರೆಮಿಡಿಸಿವರ್ ಲಸಿಕೆಯನ್ನು ಸಮರ್ಪಕವಾಗಿ ಬಳಕೆ ಮಾಡಬೇಕೆಂದು ಸೂಚನೆ ನೀಡಿದ ಅವರು ಸೋಂಕಿತರು ಹೆಚ್ಚು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಹಾಸ್ಟೆಲ್‍ಗಳನ್ನು ಸುಸ್ಥಿತವಾಗಿ ಇಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಂಬುಲೆನ್ಸ್ ಇರುವಂತೆ ನೋಡಿಕೊಳ್ಳಬೇಕು. ಕೃಷಿ, ಕೈಗಾರಿಕೆ ಚಟುವಟಿಕೆ ಇತರೆ ಕಟ್ಟಡ ಕಾಮಗಾರಿಗಳಿಗೆ ತೊಂದರೆ ಆಗದಂತೆ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು. ಜೊತೆಗೆ ತಾಲ್ಲೂಕು ಟಾಸ್ಕ್‍ಫೋರ್ಸ್, ಗ್ರಾ.ಪಂ ಹಾಗೂ ಬೂತ್ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳು ಸಕ್ರಿಯವಾಗಿ ಕೋವಿಡ್ ನಿರ್ವಹಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಹೆಚ್ಚು ಜನ ಸೇರಿದರೆ ವ್ಯವಸ್ಥಾಪಕರ ವಿರುದ್ದ ದೂರು ದಾಖಲಿಸಿ ದಂಡ ವಸೂಲಿ ಮಾಡಬೇಕು. ಅಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದಲ್ಲಿ ಸಂಬಂಧಿಸಿದ ಗ್ರಾಮ ಲೆಕ್ಕಿಗರು, ಪಿಡಿಓ, ತಹಶೀಲ್ದಾರ್ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ರೈತರಿಗೆ ಎಲ್ಲಾ ಸೌಲಭ್ಯ ನೀಡುವ ಮೂಲಕ ಮೇ 12 ರವರೆಗೆ ಯಾವುದೇ ಸಂಕಷ್ಟಗಳು ಆಗದಂತೆ ನೋಡಿಕೊಳ್ಳಬೇಕೆಂದು ಕೃಷಿ ಅಧಿಕಾರಿಗಳು ಮತ್ತು ತಹಶೀಲ್ದಾರರಿಗೆ ತಿಳಿಸಿದರು.
ಗ್ರಾಮೀಣ ಭಾಗಗಳಲ್ಲಿ ಹಾಗೂ ನಗರವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಹೊರ ಜಿಲ್ಲೆಗಳಿಂದ ಬಂದವರ ಮುಖ್ಯವಾಗಿ ಬೆಂಗಳೂರಿನಿಂದ ಬಂದವರ ಕುರಿತು ಆಯಾ ಗ್ರಾಮದ ಪಿಡಿಒ ಗಳು, ಆಶಾ ಕಾರ್ಯಕರ್ತೆಯರು ಸಂಬಂಧಪಟ್ಟ ಸಿಬ್ಬಂದಿಗಳು ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಬೇಕು ಮತ್ತು ಅವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ವೈದ್ಯಕೀಯ ತಜ್ಞರ ಸಲಹೆಯ ಆಧಾರದ ಮೇಲೆ ಆಕ್ಸಿಜನ್ ಹಾಗೂ ಬೆಡ್ ನೀಡಬೇಕು. ಬೆಡ್‍ನ ಅವಶ್ಯವಿಲ್ಲದೆಯೂ ಬೆಡ್‍ಗಾಗಿ ಒತ್ತಾಯಿಸಿದರೆ ಅಂತಹವರಿಗೆ ಬೆಡ್ ಕೊಡಬೇಡಿ. ಹಾಗೂ ಖಾಸಗಿ ಆಸ್ಪತ್ರೆಯವರು ಸ್ವಲ್ಪ ಹಣ ಖರ್ಚು ಮಾಡಿ ತಮ್ಮ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಪ್ರಮಾಣ ಜಾಸ್ತಿ ಮಾಡಿಕೊಂಡು ಜನರನ್ನು ರಕ್ಷಣೆ ಮಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್‍ನಾಯಕ್, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಜಿ.ಪಂ ಉಪಕಾರ್ಯದರ್ಶಿ ಆನಂದ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಸ್‍ಎಲ್‍ಓ ರೇಷ್ಮಾ ಹಾನಗಲ್, ಡಿಹೆಚ್‍ಒ ಡಾ.ನಾಗರಾಜ್ ಆರ್‍ಸಿಹೆಚ್‍ಓ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಾ.ಮೀನಾಕ್ಷಿ, ಡಾ.ರೇಣುಕಾರಾಧ್ಯ, ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು