ಒಣಎಲೆಗಳ ಸುಡಬೇಡಿ ಬಂಧುಗಳೇ ಕೊರಡಿಗೆ ಕಡ್ಡಿ ಗೀರಬೇಡಿ ಬಾಂಧವರೇ ಯಾವ ಜೀವಿ ಬದುಕುತಿಹುದೋ ಅದರೊಳಗೆ ಬಾಳಲಿ ಬಿಡಿ ತಮ್ಮಷ್ಟಕೆ ಸುಮ್ಮಗೆ !!

ದಾವಣಗೆರೆ : ಹಕ್ಕಿಗೂಡಿಗೆ ಬೇಕು ಒಣಎಲೆ ಚಿಟ್ಟೆ ದುಂಬಿ ಮೊಟ್ಟೆ ನೋಡು ಕೊರಡಲ್ಲೇ ಎಲೆಯ ಕೊರಡ ಸುಡುವ ಗೀಳು ಏತಕೆ ನೆಲೆಯನುಳಿಸಿ ಬದುಕಬಿಡು ಆ ಜೀವಕೆ!!
ತರಗೆಲೆಯಲಿ ಹರಿವ ಇರುವೆ ಶತಪಾದಿಯೂ ಕಡ್ಡಿಕೊರಡ ಪುಡಿಗಟ್ಟುವ ಗೆದ್ದಲೂ ಮಣ್ಣ ಒಳಗೆ ಬಿಲವ ತೊಡೋ ಇಲಿಗಳೂ ಬಿಲಕೆ ಇಳಿದು ಇಣುಕಿ ನೋಡೋ ಹಲ್ಲಿಗಳೂ !!
ಒಣಹುಲ್ಲನ್ನು , ಎಲೆಗಳನ್ನು, ಗರಿಗಳನ್ನು ಅವಲಂಬಿಸಿ ಬದುಕುವ ಜೀವಿಸಂಕುಲವೇ ನಮ್ಮಲ್ಲಿವೆ. ಈ ಕೆಳಗಿನ ಚಿತ್ರ ಅದನ್ನೇ ತೋರಿಸುತ್ತಿದೆ. ಈ ಚಿತ್ರ ನೋಡಿ ಅನಿಸಿದ್ದನ್ನು ಹಾಗೆಯೇ ಕಾಣಿಸಿದ್ದೇನೆ.
ಮರದ ಕೊರಡು ನಿರ್ಜೀವಿ ಎನ್ನುವುದೇ ತಪ್ಪು. ಉರುಳಿದ ಮರ ಅಥವಾ ಗಿಡ/ಮರಗಳ ಕೊಂಬೆಗಳು ಕೂಡಾ ವಿವಿಧ ಬಗೆಯ ಜೀವಿಜಂತುಗಳಿಗೆ ಆಶ್ರಯ ನೀಡಿ ಜೀವಿಸುತ್ತವೆ .
ಆದ್ದರಿಂದ ಇನ್ನು ಮುಂದೆ ಗಿಡ/ಮರಗಳ ಕೊಂಬೆಗಳನ್ನು ಕಡಿದು ಜೈವಿಕ ಇದ್ದಲಾಗಿ (Biochar) ಉರುವಲಾಗಿ ಅಥವಾ ಇನ್ನಿತರ ರೀತಿಯಲ್ಲಿ ಬಳಸುವ ಮೊದಲು ಒಮ್ಮೆ ಯೋಚಿಸಬೇಕಿದೆ.
ಉದುರಿದ ಕೊಂಬೆ ಅಥವಾ ಮರದ ಕಾಂಡವೊಂದು ಸಂಪೂರ್ಣವಾಗಿ ಕೊಳೆತು ಕಳಿಯಲು ವರ್ಷವೇ ಬೇಕೇನೋ. ಕೊಳೆಯುವಿಕೆಯ ಕಾಲಾವಧಿ ಆ ಪ್ರದೇಶದಲ್ಲಿನ ಹವಾಮಾನದ ಮೇಲೆ ಅವಲಂಬಿಸಿದೆ.
ನಿಧಾನಗತಿಯ ಕೊಳೆಯುವಿಕೆ ಕಾಲಘಟ್ಟದಲ್ಲಿ ಆ ಮರದ ಕೊರಡಿನಲ್ಲಿರುವ ಸಾರಜನಕ, ರಂಜಕ, ಪೊಟಾಷ್, ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶಗಳು ಬಿಡುಗಡೆಯಾಗಿ ಅಲ್ಲಿ ಬೆಳೆಯುತ್ತಿರುವ ಇನ್ನಿತರ ಗಿಡಗಳ ಬೆಳವಣಿಗೆಗೆ ನೆರವಾಗುತ್ತವೆ. ಅಲ್ಲಿಗೆ ಮರದ ಕೊರಡಿನಲ್ಲಿದ್ದ ಪೋಷಕಾಂಶಗಳು ಮರುಬಳೆಕೆಯಾಗುತ್ತಿದೆ ಎಂದಾಯ್ತು.
ಮರದ ಕೊರಡು ಉರುಳಿದ ಹೊಲ / ತೋಟಗಳಲ್ಲಿನ ಮಣ್ಣು ಈ ಪೋಷಕಾಂಶಗಳಿಂದ ಕ್ರಮೇಣ ಫಲವತ್ತತೆ ಪಡೆದುಕೊಳ್ಳುತ್ತವೆ. ಹಾಗೆಯೇ ಆ ಮಣ್ಣಿನ ರಚನೆ ಸುಧಾರಿಸುತ್ತದೆ. ಮನ್ನಲ್ಲಿನ ರಂಧ್ರಗಳ ಸಂಖ್ಯೆ ಹೆಚ್ಚಾಗುತ್ತದೆ.
ಜೊತೆಗೆ ಮರದ ಕೊರಡು ಬಹುತೇಕ ಜೀವಿಜಂತುಗಳಿಗೆ, ವಿಶೇಷವಾಗಿ ಗೆದ್ದಲು, ಫಂಗಿ ಹಾಗೂ ಕೆಲಬಗೆಯ ಕೀಟಗಳಿಗೆ ಆಹಾರದ ಮೂಲವೂ ಆಗುತ್ತದೆ.
ಈ ರೀತಿಯಲ್ಲಿ ಮರದ ಕೊರಡೊಂದು ಅನೇಕ ಬಗೆಯ ಕ್ರಿಮಿಕೀಟಗಳಿಗೆ ಹಾಗೂ ಜೀವಿಜಂತುಗಳಿಗೆ ಆಶ್ರಯತಾಣವಾಗಿಯೂ ಮತ್ತು ಆಹಾರದ ಮೂಲವಾಗಿಯೂ ಪ್ರಯೋಜನಕಾರಿಯಾಗಿದೆ. ಜೊತೆಗೆ ಉರುಳಿದ ಮರದ ಭಾಗಗಳು ಸ್ವಲ್ಪ ಮಟ್ಟಿಗೆ ಅಲ್ಲಿನ ಪರಿಸರದ ಸ್ಥಿತಿಗತಿಯನ್ನೂ ಸಹ ತಹಬದಿಗೆ ತರುತ್ತವೆ.