ದಾವಣಗೆರೆ ಜಿಲ್ಲೆಯಲ್ಲಿ ಎಷ್ಟು ಪುರುಷರಿಗೆ ಎಷ್ಟು ಮಹಿಳೆಯರಿದ್ದಾರೆ ಗೊತ್ತಾ? ಇಲ್ಲಿದೆ ಶಾಕಿಂಗ್ ಸುದ್ದಿ

ದಾವಣಗೆರೆ : ಹೆಣ್ಣು ಭ್ರೂಣ ಹತ್ಯೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅರಿವು ಮೂಡಿಸುವ ಕಾರ್ಯಗಾರವನ್ನು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಬಳಿ ಇರುವ ಗಾಂಧಿ ಭವನದಲ್ಲಿ ಆಯೋಜಿಸಿದ್ದರು. ಹೆಣ್ಣು ಭ್ರೂಣ ಹತ್ಯೆ ಮಾಡಿಸುವ ಪೋಷಕರಿಗಿಂತ ಲಿಂಗಪತ್ತೆ ಮಾಡುವ ಹಾಗೂ ಅದಕ್ಕೆ ಸಲಹೆ ಸೂಚನೆ ನೀಡುವ ವೈದ್ಯರು ಮಹಾಪಾಪದ ಕೂಪಕ್ಕೆ ಹೋಗುತ್ತಾರೆ ಎಂದು ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹೇಳಿದ್ದರು.
ಹೌದು ಎಷ್ಟು ಪುರುಷರಿಗೆ ಎಷ್ಟು ಮಹಿಳೆಯರಿದ್ದಾರೆ ಗೊತ್ತಾ?
ಹೆಣ್ಣು ಭ್ರೂಣ ಹತ್ಯೆ ಮಾಡುವವರ ಸಂಖ್ಯೆ ದಿನೆದಿನೇ ಹೆಚ್ಚುತ್ತಿದ್ದು ಮಹಿಳೆಯರ ಪ್ರಮಾಣ ದೇಶದಲ್ಲಿ ತೀರ ಕಡಿಮೆಯಾಗುತ್ತಿದೆ. 2011ರ ಜನಗಣತಿ ಪ್ರಕಾರ ಭಾರತ ದೇಶದಲ್ಲಿ 1000 ಪುರುಷರಿಗೆ 940 ಮಹಿಳೆಯರು, ಕರ್ನಾಟಕ ರಾಜ್ಯದಲ್ಲಿ 1000 ಪುರುಷರಿಗೆ 973 ಮಹಿಳೆಯರಿದ್ದಾರೆ. ಅಂದರೆ ಭಾರತದಲ್ಲಿ ಪುರುಷರಿಗೆ ಸರಿಸಮಾನರಾಗಲು 60 ಮಹಿಳೆಯರು ಹಾಗೂ ಕರ್ನಾಟಕ ರಾಜ್ಯದಲ್ಲಿ 27 ಮಹಿಳೆಯರು ಕಡಿಮೆ ಇದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಎಷ್ಟು ಪುರುಷರಿಗೆ ಎಷ್ಟು ಮಹಿಳೆಯರಿದ್ದಾರೆ ಗೊತ್ತಾ?
ಹೆಚ್ಎಂಐಎಸ್ ಪೋರ್ಟಾಲ್ನ ಆಧಾರದಂತೆ ದಾವಣಗೆರೆ ಜಿಲ್ಲೆ ವ್ಯಾಪ್ತಿಯ ಚನ್ನಗಿರಿ ತಾಲೂಕಿನಲ್ಲಿ 1000 ಪುರುಷರಿಗೆ 925 ಮಹಿಳೆಯರು, ದಾವಣಗೆರೆಯಲ್ಲಿ 1000 ಪುರುಷರಿಗೆ 936 ಮಹಿಳೆಯರು, ಹರಿಹರದಲ್ಲಿ 1000 ಪುರುಷರಿಗೆ 1015 ಮಹಿಳೆಯರು, ಹೊನ್ನಾಳಿಯಲ್ಲಿ 1000 ಪುರುಷರಿಗೆ 995 ಮಹಿಳೆಯರು, ಜಗಳೂರಿನಲ್ಲಿ 1000 ಪುರುಷರಿಗೆ 1007 ಮಹಿಳೆಯರು ಇದ್ದಾರೆ. ಹರಿಹರದಲ್ಲಿ 1015 ಮಹಿಳೆಯರು ಹಾಗೂ ಜಗಳೂರಿನಲ್ಲಿ 1007 ಮಹಿಳೆಯರಿದ್ದು ಈ ಎರಡು ತಾಲೂಕಿನಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚಿದೆ ಎಂದು ಹೇಳಲಾಗಿದೆ.