ವೈದ್ಯರೊಂದಿಗೆ ಸಂವಾದ ; ವಿವಿಧ ವಿಷಯಗಳ ಚರ್ಚೆ

ದಾವಣಗೆರೆ. ಜು.5: ಮೆಡಿಕಲ್ ಸರ್ವಿಸ್ ಸೆಂಟರ್, ರಾಜ್ಯ ಸಮಿತಿಯಿಂದ ಕೋವಿಡ್ ಹೋರಾಟದಲ್ಲಿ ಸಾವಿರಕ್ಕೂ ಮೀರಿ ಮರಣ ಹೊಂದಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಗೌರವ ಸಲ್ಲಿಸುತ್ತಾ ವೈದ್ಯರ ದಿನ ದ ಪ್ರಯುಕ್ತ ಒಂದು ಅರ್ಥಪೂರ್ಣ ಚರ್ಚೆಯನ್ನು ಫೇಸ್ ಬುಕ್ ಲೈವ್ ಮುಖಾಂತರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಿರಿಯ ವೈದ್ಯರಾದ ಡಾ. ನಿಖಿಲ್ ಹಾಗೂ ಸ್ತ್ರೀ ರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಇಳಾ ಕೋವಿಡ್ ಸಂದರ್ಭದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡರು. ಮಾಸ್ಕ್, ಪಿ ಪಿ ಇ ಕಿಟ್ ಧರಿಸಿ 8 ರಿಂದ 9 ಗಂಟೆಗಳವರೆಗೆ ನಿರಂತರ ಕೆಲಸ ಮಾಡಬೇಕಾದ ಪರಿಸ್ಥಿತಿ ಹಾಗೂ ಮಾನಸಿಕ ಒತ್ತಡದ ಬಗ್ಗೆ ವಿವರಣೆ ನೀಡಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದರೂ ಕೋವಿಡ್ ಕಾರಣದಿಂದಾಗಿ ತಮ್ಮ ತಜ್ಞತೆಯ ಕಲಿಕೆಯ ಬದಲು ರಾತ್ರಿ ಹಗಲು ಕೋವಿಡ್ ಕೆಲಸ ಮಾಡಬೇಕಾಗಿ ಬಂದ ಸಂದರ್ಭ ಹಾಗೂ ತಾನೂ ಕೋವಿಡ್ ಸೋಂಕಿತರಾಗಿದ್ದು, ತಮ್ಮ ತಾಯಿ ಹಾಗೂ ತಂಗಿ ಕೋವಿಡ್ ಸೋಂಕಿತರಾದಾಗ ಅವರ ಯೋಗಕ್ಷೇಮ ನೋಡಿಕೊಳ್ಳಲು ತಾವು ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದ್ದ ಬಗ್ಗೆ ನೆನಪಿಸಿಕೊಂಡರು. ಕೊರೋನ ಪಿಡುಗಿನ ಸಂದರ್ಭದಲ್ಲಿ ಸರ್ಕಾರದ ಅವ್ಯವಸ್ಥೆಯಿಂದಾಗಿ ಸಕಾಲದಲ್ಲಿ ಬೆಡ್ ಹಾಗೂ ಆಮ್ಲಜನಕ ಸಿಗದೇ ತಮ್ಮ ತಂದೆಯವರನ್ನು ಕಳೆದುಕೊಳ್ಳ ಬೇಕಾಗಿ ಬಂದ ಬಗ್ಗೆ ವೃತ್ತಿಯಲ್ಲಿ ಟೀಚರ್ ಹಾಗೂ ರೋಗಿಯ ಸಂಬಂಧಿಯಾದ ರಾಜೇಶ್ ವಿವರಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಹಣ ಸುಲಿಗೆ ಮಾಡಲು ರೋಗಿಗಳನ್ನು ಬಲಿಪಶುಗಳನ್ನಾಗಿ ಮಾಡುವುದು ಹಾಗೂ ಕಣ್ಮುಂದೆಯೇ ಜನರು ಸಾಯುವ ಪರಿಸ್ಥಿತಿ ನಿರ್ಮಾಣ ವಾಗಿದ್ದರ ಬಗ್ಗೆ ವಿವರಣೆ ನೀಡಿದರು.
ಚರ್ಚೆಯಲ್ಲಿ ಭಾಗವಹಿಸಿದ್ದ ಮಕ್ಕಳ ತಜ್ಞರಾದ ಡಾ. ಶಿವಕುಮಾರ್ ಮಾತನಾಡುತ್ತಾ ಕೊರೋನ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಸರ್ಕಾರವು ಸರ್ಕಾರೀ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆಯನ್ನು ಜಾಸ್ತಿ ಮಾಡಲು ಮತ್ತು ಆಮ್ಲಜನಕ ವ್ಯವಸ್ಥೆ ಮಾಡಲು ಸಂಪೂರ್ಣವಾಗಿ ವಿಫಲವಾಗಿತ್ತು. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಪೊರೇಟ್ ಮಾಫಿಯಾದಿಂದಾಗಿ ಬೆಡ್ ಗಳನ್ನು ಮುಂಚಿತವಾಗಿ ಬುಕ್ ಮಾಡಿ ಅವಶ್ಯಕತೆ ಇರುವ ರೋಗಿಗಳಿಗೆ ಒದಗಿಸುವಲ್ಲಿ ವಿಫಲವಾಗಿತ್ತು ಎಂದರು.
ರೋಗಿಯಾಗಿದ್ದು ಚರ್ಚೆಯಲ್ಲಿ ಭಾಗವಹಿಸಿದ್ದ ಧಾರವಾಡದ ಭುವನಾ ಮಾತನಾಡುತ್ತಾ ತಾನು 10 ವರ್ಷದಿಂದ ಚಾಕೊಲೇಟ್ ಸಿಸ್ಟ್ ನಿಂದಾಗಿ ಹೊಟ್ಟೆ ನೋವಿನಿಂದ ನರಳುತ್ತಿದ್ದು, ಗಂಭೀರ ಸ್ವರೂಪದ ಸಮಸ್ಯೆಯಿಂದ,ಪ್ರಾಣಾಪಾಯದಿಂದ ಪಾರಾಗಲು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ತಂಡದಿಂದ ಸಾಧ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಧೈರ್ಯ ತುಂಬಿ ಕಾಳಜಿಯಿಂದ ನೋಡಿದ ಎಲ್ಲಾ ನರ್ಸ್ ಹಾಗೂ ವೈದ್ಯ ಸಿಬ್ಬಂದಿಗಳಿಗೆ ವೈದ್ಯರ ದಿನದ ಅಂಗವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಚರ್ಚೆಯನ್ನು ಎಂಎಸ್‍ಸಿಯ ರಾಜ್ಯ ಕಾರ್ಯದರ್ಶಿ ಡಾ. ವಸುಧೇಂದ್ರ ಎನ್ ನಡೆಸಿಕೊಟ್ಟರು.