ಮಲ್ಲಿಗೇನಹಳ್ಳಿ ಮಹಿಳೆಯರ ಕಾರ್ಯ ಮೆಚ್ಚಿ ಅಭಿನಂದಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ

ಹೊನ್ನಾಳಿ: ತಾಲ್ಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಮಹಿಳೆಯರು ಸರ್ಕಾರ ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಸಂಪೂರ್ಣ ಸಾರ್ಥಕಗೊಳಿಸಿದ್ದಾರೆ.
ಗ್ರಾಮದ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ.
ಆಂಜನೇಯ ಸ್ವಾಮಿಯ ದೇವಸ್ಥಾನ ಅಭಿವೃದ್ಧಿಗಾಗಿ ಗ್ರಾಮಸ್ಥರು ಮುಂದಾಗಿದ್ದರು. ಆದರೆ ಮಳೆ ಬಾರದೇ ತೊಂದರೆ ಆದ ಕಾರಣ ಗ್ರಾಮದ ಮಹಿಳೆಯರೆಲ್ಲಾ ಒಟ್ಟಾಗಿ ಸುಮಾರು 450 ಮಹಿಳೆಯರು ತಮಗೆ ಸರ್ಕಾರದಿಂದ ಪ್ರತಿ ತಿಂಗಳು ರೂ.2000 ಬಂದ ಹಣವನ್ನು ಒಟ್ಟೂಗೂಡಿಸಿ ಸುಮಾರು ರೂ.9 ಲಕ್ಷ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ನೀಡುವ ಮೂಲಕ ಸರ್ಕಾರದ ಹಣವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.
ಇಂತಹ ಮಹಾತ್ಕಾರ್ಯ ಮಾಡಿದ ಮಲ್ಲಿಗೇನಹಳ್ಳಿ ಗ್ರಾಮದ ಮಹಿಳೆಯರನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಅಭಿನಂದಿಸಿ ನಿಮ್ಮ ಧಾರ್ಮಿಕ ಸೇವೆಗೆ ನಾನು ಸದಾ ಬೆಂಬಲವಾಗಿರುತ್ತೇನೆ ಎಂದರು.
ನಮ್ಮ ಸರ್ಕಾರ ನೀಡುವ ಹಣದಲ್ಲಿ ಸಾಕಷ್ಟು ಜನರು ವೈಯಕ್ತಿಕವಾಗಿ ಅನುಕೂಲ ಪಡೆದಿದ್ದು, ಈ ಗ್ರಾಮದ ಮಹಿಳೆಯರು ಗ್ರಾಮದ ದೇವಸ್ಥಾನದ ಅಭಿವೃದ್ಧಿಗೆ ಮುಂದಾಗಿರುವುದು ಸಾರ್ಥಕವಾಗಿದೆ. ಇದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಇದ್ದಂತೆ ಎಂದರು.
ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಮಹಿಳೆಗೆ ವಾರ್ಷಿಕ ರೂ.1 ಲಕ್ಷ ನೀಡಲಾಗುವುದು. ಇದರಿಂದ ನಿಮ್ಮ ವೈಯಕ್ತಿಕ ಜೀವನಕ್ಕೂ, ಸಾಮಾಜಿಕ ಸೇವೆಗೂ ಅನುಕೂಲವಾಗಲಿದೆ ಎಂದರು.