ಡಾ. ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ಆಯ್ಕೆ ಬಗ್ಗೆ ಅಪಸ್ವರ; ಸಚಿವ ಡಾ.ಎಚ್.ಸಿ.ಮಹದೇವಪ್ಪ ರಾಜಿನಾಮೆಗೆ ಆಗ್ರಹ

ಹರಿಹರ: ಛಲವಾದಿ ಜಾತಿಗೆ ಸೇರಿದವರನ್ನು ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಆಯ್ಕೆಯಾಗುವಂತೆ ನೋಡಿಕೊಂಡಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪನವರು ತಕ್ಷಣ ರಾಜಿನಾಮೆ ನೀಡಬೇಕೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ 2023, 2024 ಮತ್ತು 2025ನೇ ಸಾಲುಗಳಿಗೆ 15 ಜನರನ್ನು ವಿವಿಧ ಕ್ಷೇತ್ರದ ಸಾಧಕರೆಂದು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಈ 15 ಜನ ಪ್ರಶಸ್ತಿ ಪುರಸ್ಕೃತರು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರ ಜಾತಿಗೆ ಸೇರಿದವರಾಗಿದ್ದಾರೆಂದು ಗುಟ್ಟಾಗಿ ಉಳಿದಿಲ್ಲ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ಪರಿಶಿಷ್ಟರೆಂದರೆ 100ಕ್ಕೂ ಹೆಚ್ಚು ಜಾತಿ, ಜನಾಂಗದವರಿದ್ದಾರೆ, ಆದರೆ ಇಲಾಖೆ ಸಚಿವರು ಹಾಗೂ ಇಲಾಖೆಯ ಆಯುಕ್ತರು ಒಂದೆ ಜಾತಿಗೆ ಸೇರಿದ್ದು ಅವರ ಜಾತಿಯವರನ್ನು ಮಾತ್ರ ಆಯ್ಕೆ ಮಾಡಿರುವುದು ಎಷ್ಟು ಸಮಂಜಸಎಂದು ಅವರು ಪ್ರಶ್ನಿಸಿದ್ದಾರೆ.
ಡಾ.ಅಂಬೇಡ್ಕರ್ ರನ್ನು ಛಲವಾದಿ ಜಾತಿಗೆ, ಜಗಜೀವನರಾಂರನ್ನು ಮಾದಿಗ ಜಾತಿಗೆ ಡಾ.ಬಾಬು ಸೀಮಿತಗೊಳಿಸುವ ಮನೋಭಾವದ ಮಹದೇವಪ್ಪನವರು ಸಚಿವರಾಗಿ ಮುಂದುವರೆಯಲು ಅನರ್ಹರಾಗಿದ್ದಾರೆ. ರಾರ್ಷ್ಟ ನಾಯಕರನ್ನು ಒಂದು ಜಾತಿಗೆ
ಸೀಮಿತಗೊಳಿಸುವ ಕೀಳು ಮಟ್ಟದ ಕೆಲಸವನ್ನು ಸಮಾಜ ಕಲ್ಯಾಣ ಸಚಿವರಿಂದ ನಿರೀಕ್ಷೆಮಾಡಿರಲಿಲ್ಲ.
ಅಂಬೇಡ್ಕರ್ ಪ್ರಶಸ್ತಿಯ ಮೌಲ್ಯವನ್ನು ಇವರೆ ಕಳೆಯುತ್ತಿದ್ದಾರೆ, ಕರ್ನಾಟಕದ ಅಂಬೇಡ್ಕರ್ ಎಂದೆ ಕರೆಯಲ್ಪಡುವ ಪ್ರೊ.ಬಿ.ಕೃಷ್ಣಪ್ಪನವರು ಎಲ್ಲ ತಳ ಸಮುದಾಯದ ಪರವಾಗಿ ಹೋರಾಟ ಮಾಡಲಿಲ್ಲವೆ?, ಬದುಕನ್ನೆ ಸಮರ್ಪಣೆ ಮಾಡಿ ಈಗಲೂ ರಾಜ್ಯದಲ್ಲಿರುವ ಕೃಷ್ಣಪ್ಪರ ಅನೇಕ ಹಿರಿಯ ಅನುಯಾಯಿಗಳು ಇವರಿಗೆ ಯಾರೂ ಕಾಣಲಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಅಂಬೇಡ್ಕರ್ ಪ್ರಶಸ್ತಿಯನ್ನು ಕೇವಲ ಒಂದೆ ಜಾತಿಗೆ ಸೀಮಿತ ಎಂದು ಸರ್ಕಾರ ಅಧಿಕೃತ ಘೋಷಿಸಲಿ, ಇಲ್ಲವೆ ಈ ಪ್ರಶಸ್ತಿಗೆ ಪರಿಶಿಷ್ಟರ ಎಲ್ಲಾ ಜಾತಿ, ಜನಾಂಗದವರನ್ನು ಪರಿಗಣಿಸಬೇಕು. ಸಮಾಜವಾದವನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಗಿರುವ ತಪ್ಪನ್ನು ಗಮನಿಸಿ ಸರಿಪಡಿಸಬೇಕು.
ಒಂದೆ ಜಾತಿಯ ಸಾಧಕರ ಪಟ್ಟಿಯನ್ನು ರದ್ದುಪಡಿಸಿ ಒಟ್ಟಾರೆ ಪರಿಶಿಷ್ಟರಲ್ಲಿರುವ ಸಾಧಕರನ್ನು ಸೂಕ್ಷಂ ವಾಗಿ ಅವಲೋಕಿಸಿ ಹೊಸದಾಗಿ ಆಯ್ಕೆ ಮಾಡಬೇಕು, ಸ್ವಜನ ಪಕ್ಷಪಾತ ಮಾಡಿರುವ ಸಚಿವ ಮಹಾದೇವಪ್ಪರನ್ನು ಸಂಪುಟದಿಂದ ಕೈಬಿಡಬೇಕು, ಇಲಾಖೆಯ ಆಯುಕ್ತರನ್ನು ಅಮಾನತ್ತು ಪಡಿಸಬೇಕು ತಪ್ಪಿದಲ್ಲಿ ಕದಸಂಸನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.
ಪಿ.ಜೆ.ಮಹಾಂತೇಶ್.
ಹರಿಹರ