ದುಗ್ಗಮ್ಮನ ಜಾತ್ರೆಗೆ ಚಾಲನೆ ಹಂದರಗಂಬ ಪೂಜೆ ನೆರವೇರಿಸಿದ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆಗೆ ಮಂಗಳವಾರ ಹಂದರಗಂಬದ ಪೂಜೆ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶ್ರೀ ದುರ್ಗಾಬಿಕಾ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಂದರಗಂಬಕ್ಕೆ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಲ್ಲಿಕಾರ್ಜುನ್ ಅವರು, ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಹಂದರಗಂಬದ ಮೂಲಕ ಚಾಲನೆ ನೀಡಲಾಗಿದೆ ಎಂದರು.
ಮಾರ್ಚ್ 19 ಹಾಗೂ 20 ರಂದು ನಡೆಯುವ ಜಾತ್ರೆಯನ್ನು ಸುಗಮ ಹಾಗೂ ಸರಾಗವಾಗಿ ನಡೆಯಲು ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆಯಿಂದ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಶಾಸಕ ಶಾಮನೂರು ಶಿವಶಂರಪ್ಪ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗೌಡ್ರ ಚನ್ನಬಸಪ್ಪ, ಪಾಲಿಕೆ ಮೇಯರ್ ಬಿ.ಹೆಚ್. ವಿನಾಯಕ, ಹೆಚ್.ಬಿ. ಗೋಣೆಪ್ಪ, ಮಾಲತೇಶ್ ಜಾಧವ್, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಉಮೇಶ್ ಸಾಳಂಕಿ, ಬಾಬುರಾವ್ ಸಾಳಂಕಿ ಇತರರು ಈ ಸಂದರ್ಭದಲ್ಲಿದ್ದರು.