“ಚುನಾವಣೆ ಸಮಯದಲ್ಲಿ ಶಿವಶಂಕರಪ್ಪ ಕೊಟ್ಟ ಸಾಲ ಕೊಡಲಿಲ್ಲ, ಬಡ್ಡಿ ಸಮೇತ ವಸೂಲಿ ಮಾಡಿದ್ದೆ” – ಜಿಎಂ ಸಿದ್ದೇಶ್ವರ
ದಾವಣಗೆರೆ : ಭೀಮಸಮುದ್ರ ಗಣಿಗಾರಿಕೆ ಬಂದ್ ಆಗಿರುವ ಬಗ್ಗೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಿವಶಂಕರಪ್ಪನವರ ಸಚಿವ ಎಸ್..ಎಸ್.ಮಲ್ಲಿಕಾರ್ಜುನ ನಡುವೆ ಮಾತಿನ ಗದಾಯುದ್ಧ ಮುಂದುವರಿದಿದೆ. ಕೆಲ ದಿನಗಳ ಹಿಂದೆ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ದ ಹರಿಹಾಯ್ದಿದ್ದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಗೆ ಸಂಸದ ಸಿದ್ದೇಶ್ವರ್ ಪಂಚ್ ಕೊಟ್ಟಿದ್ದಾರೆ. ಸಂಸದ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ ಎಂಪಿ ಚುನಾವಣೆಗೆ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ ವಿರುದ್ದ ಹರಿಹಾಯ್ದರು. ನಂತರ ಎಸ್.ಎಸ್.ಮಲ್ಲಿಕಾರ್ಜುನ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು.
‘ಆನೆ ನಡೆಯುವಾಗ ನಾಯಿ ಬೊಗಳುವುದು ಸಹಜ ಅದಕ್ಕೆಲ್ಲ ತಲೆಕೆಡಿಸಿಕೊಳ್ಳೋದಿಲ್ಲ. ‘ಕಾಲೇಜು, ಜಮೀನು ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಆರೋಪ ಮಾಡಿದ್ದಾರೆ. ದುಡಿದ ಹಣದಲ್ಲಿ ಎಲ್ಲವನ್ನೂ ಖರೀದಿಸುತ್ತೇನೆ. ನಾನೇನು ಭ್ರಷ್ಟಾಚಾರ ಮಾಡಿಲ್ಲ. ನಮ್ಮ ತಂದೆ ಕಾಲದಿಂದಲೂ ನಾವು ವ್ಯಾಪಾರಸ್ಥರು. ನಾನು ಆಗಲೇ ಐಟಿ ಫೇರ್ ಆಗಿದ್ದೆ. ಎಲ್ಲವೂ ಲೆಕ್ಕ ಇದೆ. ಶಾಸಕ ಶಾಮನೂರು ಶಿವಶಂಕರಪ್ಪರಿಗೆ ನಾವು 90 ದಶಕದಲ್ಲಿ ಸಾಲ ನೀಡಿ ನಮ್ಮ ಬಿಜೆಪಿ ಸರಕಾರ ಅಧಿಕಾರ ಇದ್ದಾಗ ಯಾವುದೇ ಯೋಜನೆಯಡಿ ದುಡ್ಡೂ ಹೊಡೆದಿಲ್ಲ. ಸ್ಮಾರ್ಟ್ ಸಿಟಿ, ಆಶ್ರಯ ಮನೆ ಹಂಚಿಕೆ ಬಗ್ಗೆ ತನಿಖೆ ಮಾಡಿಸುವುದಾದರೆ ಮಾಡಲಿ. ಅದರ ಜೊತೆಗೆ ಮಲ್ಲಿಕಾರ್ಜುನ್ ಈ ಹಿಂದೆ ಸಚಿವರಾಗಿದ್ದಾಗ ನಡೆದಿರುವ ಕಾಮಗಾರಿಗಳ ಕುರಿತೂ ತನಿಖೆ ನಡೆಸಲಿ. ನನಗೇನೂ ಭಯವಿಲ್ಲ’ ಎಂದು ತಿರುಗೇಟು ನೀಡಿದರು.
‘ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನನ್ನ ಆಸ್ತಿ ಬಗ್ಗೆ ಕೇಳುತ್ತಾರೆ. 1994ರಲ್ಲಿ ಮಲ್ಲಿಕಾರ್ಜುನ್ ಅವರ ತಂದೆ, ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಾಲ ಕೊಟ್ಟಿದ್ದೆ. ಶಾಮನೂರು ಅವರು ನನ್ನ ಮಾವ. ಅವರೊಂದಿಗೆ ನನ್ನ ಬಾಂಧವ್ಯ ಚೆನ್ನಾಗಿಯೇ ಇತ್ತು. 1996ರಲ್ಲೂ ಶಿವಶಂಕರಪ್ಪ ಅವರು ನನ್ನ ಬಳಿ ಸಾಲ ಪಡೆದಿದ್ದರು’ ಎಂದು ಹೇಳಿದರು.
‘1997ರಲ್ಲಿ ನಾನು ₹6 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡು ₹1.80 ಕೋಟಿ ತೆರಿಗೆ ಕಟ್ಟಿದ್ದೆ. ಆಗ ಶಾಮನೂರು ಶಿವಶಂಕರಪ್ಪ ತೆರಿಗೆ ಕಟ್ಟಲು ಸಾಲ ಪಡೆದಿದ್ದರು. ಚುನಾವಣೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕೊಡಲಿಲ್ಲ. ನಂತರ ಬಡ್ಡಿ ಸಮೇತ ವಸೂಲಿ ಮಾಡಿದ್ದೆ’ ಎಂದರು.
ನಾನು ಮಾತ್ರವಲ್ಲ ನಮ್ಮ ಇಡೀ ವಂಶದಲ್ಲೇ ಯಾರೊಬ್ಬರೂ ಲಂಚ ತೆಗೆದುಕೊಂಡಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವ ಕುರಿತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೀಡಿರುವ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
”ಬೇಲೇಕೇರಿ ಮೈನಿಂಗ್ ಬಗ್ಗೆ ಸಚಿವ ಎಸ್‌ಎಸ್‌ಎಂ ಮಾತನಾಡಿದ್ದಾರೆ. 2015ರಲ್ಲಿ ನಾನು ಮಂತ್ರಿಯಾಗಿದ್ದಾಗ ಬೇಲಿಕೆರೆ ಅದಿರು ರಫ್ತು ನಡೆಯುತ್ತಿತ್ತು. ನಾವು ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಿಲ್ಲ, ಅದಿರು ಎಕ್ಸ್ ಪೋರ್ಟ್ ನಲ್ಲಿ ಒಂದು ಕೆಜಿ ಕೂಡ ಹೆಚ್ಚು ಕಡಿಮೆ ಆಗಿಲ್ಲ. ಆಗ 10 ಟನ್ ಗಿಂತ ಹೆಚ್ಚು ಅದಿರು ಸಾಗಣೆ ಮಾಡುವಂತಿರಲಿಲ್ಲ. ಲಾರಿಯವರು ಕೆಲಸ ನಿಲ್ಲಿಸಿ ಚಕಾರ ಎತ್ತಿದರು. ರಫ್ತು ಒಪ್ಪಂದ ಮಾಡಿಕೊಂಡಿದ್ದರಿಂದ ಅನಿವಾರ್ಯವಾಗಿ 15 ಟನ್‌ವರೆಗೆ ಅದಿರು ಸಾಗಣೆ ಮಾಡಿದ್ದೇವೆ. ಇದರಲ್ಲಿ ಒಂದು ಗುಲಗಂಜಿಯಷ್ಟೂ ವ್ಯತ್ಯಾಸ ಆಗಿಲ್ಲ. ಆದರೆ ನನ್ನ ಮೇಲೆ ಗೂಬೆ ಕೂರಿಸಬೇಕೆಂಬ ದುರುದ್ದೇಶದಿಂದ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಲಾರಿಗಳನ್ನು ಹಿಡಿಸಿ ನಮ್ಮ ತಮ್ಮನಿಗೆ ತೊಂದರೆ ಕೊಟ್ಟರು. ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ಕೇಸನ್ನು ನ್ಯಾಯಾಲಯ ವಜಾ ಮಾತ್ತು,” ಎಂದು ಸಂಸದರು ಮಾಹಿತಿ ನೀಡಿದರು.
ನಾನು ಹೊನ್ನಾಳಿಗೆ ಹೋಗೆನೆ! ”ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ತಮಗೇ ನೀಡುವಂತೆ ಮಾಜಿ ಶಾಸಕ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ. ಅವರಂತೆ ನಾನೂ ಒಬ್ಬ ಆಕಾಂಕ್ಷಿ. ಎಂಪಿ ಟಿಕೆಟ್ ಅವರಿಗೆ ಕೊಡಲಿ. ಆಗ ಹೊನ್ನಾಳಿ ಕ್ಷೇತ್ರ ಖಾಲಿ ಆಗುತ್ತದೆ, ಅಲ್ಲಿ ನಮ್ಮವರು ಬಹಳ ಮಂದಿ ಇದ್ದು, ಕ್ಷೇತ್ರದಿಂದ ಸ್ಪರ್ಧಿಸಿ ಎಂದು ತುಂಬಾ ದಿನಗಳಿಂದ ಕೇಳುತ್ತಿದ್ದಾರೆ. ರೇಣುಕ ಸ್ವಾಮಿ ಇಲ್ಲಿಗೆ ಬಂದರೆ, ನಾನು ಹೊನ್ನಾಳಿಯಿಂದ ಎಂಎಲ್ ಎ ಸ್ಥಾನಕ್ಕೆ ಸರ್ಧಿಸುತ್ತೇನೆ,” ಎಂದು ಸಂಸದರು ತಿಳಿಸಿದರು.
”1993ಕ್ಕೂ ಇಂದಿಗೂ ನಮ್ಮ ಆಸ್ತಿ ಹೆಚ್ಚಳ ಆಗಿದೆ. ಹೌದು. ನಾವೇನು ಕಳ್ಳತನ ಮಾಡಿ, ಭ್ರಷ್ಟಾಚಾರ ಮಾಡಿ ಆಸ್ತಿ ಸಂಪಾದಿಸಿಲ್ಲ. ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಸಾಬೀತು ಮಾಡಿದರೆ ನನ್ನೆಲ್ಲ ಆಸ್ತಿಯನ್ನೂ ಅವರಿಗೆ (ಸಚಿವ ಎಸ್.ಎಸ್.ಎಂಗೆ) ಬರೆದುಕೊಡುತ್ತೇನೆ. ಅವರ ಮನೆಯಲ್ಲಿ ದುಡಿಯುವುದು ಅವರೊಬ್ಬರೇ, ನನ್ನನ್ನೂ ಸೇರಿ ನಮ್ಮ ಮನೆಯಲ್ಲಿ ಆರು ಜನ ದುಡಿಯುತ್ತೇವೆ. ಒಬ್ಬ ದುಡಿಯುವುದಕ್ಕೂ ಆರು ಮಂದಿ ದುಡಿಯುವುದಕ್ಕೂ ವ್ಯತ್ಯಾಸವಿದೆ. ಹಿಂದೆ ಅವರ ಆಸ್ತಿ ಎಷ್ಟಿತ್ತು, ನಮ್ಮ ಆಸ್ತಿ ಎಷ್ಟಿತ್ತು ಎಂಬುದನ್ನು ಲೆಕ್ಕ ಹಾಕಲಿ, ಅವರದೇ ಸರಕಾರವಿದೆ. ಬೇಕಿದ್ದರೆ ತನಿಖೆ ಮಾಡಲಿ, ಭ್ರಷ್ಟಾಚಾರ ಸಾಬೀತಾದರೆ ಶಿಕ್ಷೆ ಅನುಭವಿಸಲು ನಾನು ಸಿದ್ಧ” ಎಂದು ಸವಾಲು ಹಾಕಿದರು.
ನನ್ನ ಮೇಲೆ ಪ್ರೀತಿ: ”ಸಚಿವ ಮಲ್ಲಿಕಾರ್ಜುನ್‌ಗೆ ನನ್ನ ಮೇಲೆ ಬಹಳ ಪ್ರೀತಿ, ಹಾಗಾಗಿ ಅವರು ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ಅದು ಅವರ ಸಂಸ್ಕಾರ ಹೇಗಿದೆ ಎಂದು ತೋರಿಸುತ್ತದೆ. ಮಾವನವರಾದ ಶಾಮನೂರು ಶಿವಶಂಕರಪ್ಪ ಅವರು ಎಲ್ಲೇ ಎದುರಾದರೂ ನಾನು ನಮಸ್ಕಾರ ಮಾಡುತ್ತೇನೆ. ಹಿರಿಯರು ಕಂಡಾಗ ನಮಸ್ಕರಿಸುವುದು ನಮ್ಮ ಸಂಸ್ಕೃತಿ, ಹೆತ್ತವರು ನನಗೆ ಕಲಿಸಿರುವ ಸಂಸ್ಕಾರ, ಅಂತಹ ಸಂಸ್ಕೃತಿ, ಸಂಸ್ಕಾರ ಅವರಿಗೆ ಇಲ್ಲ ಎಂದಾದರೆ ಏನು ಮಾಡುವುದು,” ಎಂದು ಪ್ರಶ್ನಿಸಿದರು.