ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಹಾಗೂ ಆಹಾರ ಇಲಾಖೆ ಜಂಟಿ ದಾಳಿ.! ನ್ಯಾಯಬೆಲೆ ಅಂಗಡಿಯಿಂದ ಪಡಿತರ ಅಕ್ಕಿ ಸಾಗಾಟ ಜಾಲ ಪತ್ತೆ.!

ದಾವಣಗೆರೆ: ದಾವಣಗೆರೆ ನಗರ ಉಪ ವಿಭಾಗದ ಡಿ.ವೈ.ಎಸ್.ಪಿ ನರಸಿಂಹ ವಿ. ತಾಮ್ರಧ್ವಜ ಅವರಿಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಬೂ ಬಜಾರ್ ನ ವಿನಾಯಕ ಟಾಕೀಸ್ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ-40 ರಲ್ಲಿ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಬೇರೆ ಕಡೆಗೆ ಅಕ್ರಮವಾಗಿ ಸಾಗಿಸಲು ಲಾರಿಯಲ್ಲಿ ತುಂಬುತ್ತಿದ್ದ ಓರ್ವ ವ್ಯಕ್ತಿ ಹಾಗೂ ಲಾರಿಯನ್ನ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬೆಳಗ್ಗೆ 5 ಗಂಟೆ ವೇಳೆಗೆ ಅಕ್ರಮವಾಗಿ ನ್ಯಾಯಬೆಲೆ ಅಂಗಡಿಯಿಂದಲೆ ಪಡಿತರ ಅಕ್ಕಿಯನ್ನ ಗೋಣಿ ಚೀಲದಿಂದ ಪ್ಲಾಸ್ಟಿಕ್ ಚೀಲಕ್ಕೆ ಪಲ್ಟಿ ಮಾಡಿ ಲಾರಿಗೆ ತುಂಬುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿ ಲಾರಿ ಮಾಲೀಕರ ವಿರುದ್ದ ಆರ್ ಎಂ ಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಲಾರಿ ಚಾಲಕನನ್ನ ಬಂದಿಸಲಾಗಿದೆ. ಅಕ್ಕಿ ಕಳ್ಳ ಸಾಗಾಟದ ಖಚಿತ ಮಾಹಿತಿ ಬಂದ ಮೇರೆಗೆ ನರಸಿಂಹ ವಿ. ತಾಮ್ರಧ್ವಜ, ಡಿ.ವೈ.ಎಸ್.ಪಿ ನಗರ ಉಪ ವಿಭಾಗ ನೇತೃತ್ವದಲ್ಲಿ ಸಿಪಿಐ ಗಜೇಂದ್ರಪ್ಪ, ಅಜಾದ್ ನಗರ ವೃತ್ತ, ಅಜಾದ್ ನಗರ ಪೊಲೀಸ್ ಠಾಣೆಯ ಪಿಎಸ್ ಐ ತಿಪ್ಪೇಸ್ವಾಮಿ, ಆರ್ ಎಂ ಸಿ ಠಾಣೆಯ ಪಿಎಸ್ಐ ಜಿ. ನಾಗರಾಜ, ಪ್ರವೀಣ್, ಸಿಬ್ಬಂದಿಗಳಾದ ವೆಂಕಟೇಶ್, ವೀರೇಶ್, ನಾರಾಯಣ, ಕವಿತ, ಹಾಗೂ ಅಜಾದ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ ಹನುಮಂತಪ್ಪ, ಉಮೇಶ್ ನಾಯ್ಕ, ಮತ್ತು ಶಬಾನ ಪರ್ವೀನ್, ಆಹಾರ ನಿರೀಕ್ಷಕರು, ದಾವಣಗೆರೆ ಉತ್ತರ ವಲಯ (ಪ್ರಭಾರ), ದಾಳಿಯಲ್ಲಿ ಭಾಗಿಯಾಗಿದ್ದರು.
ನ್ಯಾಯಬೆಲೆ ಅಂಗಡಿಯಿಂದ ಅಕ್ರಮವಾಗಿ ಮಾಡಲಾಗುತ್ತಿದ್ದ 1)9,350 ಕೆ.ಜಿ (93 ಕ್ವಿಂಟಲ್ 50 ಕೆ.ಜಿ) ಪಡಿತರ ಅಕ್ಕಿ, ಅಂದಾಜು ಬೆಲೆ-01,40,250/- ರೂ ಗಳು, 2)ಕೆಎ-15, 5179 ನೇ ಸ್ವರಾಜ್ ಮಜಡಾ ಲಾರಿ, ಅಂದಾಜು ಬೆಲೆ 6 ಲಕ್ಷ, 3)ಪಿಡಿಎಸ್ ಅಕ್ಕಿಯ 186 ಖಾಲಿ ಗೋಣಿ ಚೀಲಗಳು. ಅಂದಾಜು ಬೆಲೆ 3720/- ರೂ ಗಳು, 4)ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ ಅಂದಾಜು ಬೆಲೆ 5000/- ರೂ ಗಳನ್ನು ಹಾಗೂ ಆರೋಪಿತರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂದನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮ ಪಡಿತರ ಸಾಗಾಟ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಸರಗಿರವರು ಶ್ಲಾಘಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯವರಿಂದಲೆ ಅಕ್ರಮ ನಡೆದಿದ್ದು, ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದೆವೆ ಎಂದು ಆಹಾರ ನೀರಿಕ್ಷಕರಾದ ಶಬಾನಾ ಪರ್ವೀನ್ ಗರುಡಚರಿತೆ ಪತ್ರಿಕೆಗೆ ತಿಳಿಸಿದ್ದಾರೆ.
ದಾವಣಗೆರೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು ಅಕ್ರಮ ಪಡಿತರ ಸಾಗಾಟ ಹಾಗೂ ಮಾರಾಟದ ಬಗ್ಗೆ ದೂರುಗಳು ದಾಖಲಾಗುತ್ತಿದ್ದರೂ ಸಹ ದಂಧೆಕೋರರಿಗೆ ಯಾರಿಗೂ ಬಗ್ಗದೆ ತಮ್ಮದೇ ಆದ ದಾಟಿಯಲ್ಕಿ ವ್ಯವಹಾರ ಮಾಡುತ್ತಿದ್ದಾರೆ, ಅದರಲ್ಲೂ ದಾವಣಗೆರೆಯ ಆಜಾದ್ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಕೆಟಿಜೆ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಬಂದು ಮನೆ ಮನೆಗಳಿಂದ ಪಡಿತರ ಅಕ್ಕಿಯನ್ನು ಖರೀದಿ ಮಾಡುತ್ತಾರೆ ಎಂಬ ಹಲವಾರು ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ದಾವಣಗೆರೆಯ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಬಳಿ ಅಕ್ರಮ ದಂಧೆಕೋರರ ಮಾಹಿತಿ ಇದೆ ಅವರ ವಿರುದ್ದ ಇನ್ನಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡರೆ ಪಡಿತರ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುವುದು ತಪ್ಪಿಸಬಹುದು ಎನ್ನಲಾಗುತ್ತದೆ.