ಹಿರಿಯ ಶಿಕ್ಷಣ ತಜ್ಞ ಕಸ್ತೂರಿ ರಂಗನ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿದ್ದಾರೆ ಹಾಗಾದರೆ, ಅವರೇನು ಆರ್ ಎಸ್ ಎಸ್ ನವರಾ.? – ಸಚಿವ ಬಿ.ಸಿ. ನಾಗೇಶ್ ಪ್ರಶ್ನೆ

ದಾವಣಗೆರೆ: ಹೊಸ ಶಿಕ್ಷಣ ನೀತಿಯ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಸೇರಿ ಏಳು ಮಂದಿ ಪ್ರಧಾನಿಗಳಿಗೆ ಸಲಹೆಗಾರರಾಗಿದ್ದ ಹಿರಿಯ ಶಿಕ್ಷಣತಜ್ಞ ಕಸ್ತೂರಿ ರಂಗನ್ ಅವರಿದ್ದಾರೆ. ಹಾಗಾದರೆ, ಅವರೇನು ಆರ್ಎಸ್ಎಸ್ನವರ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರಶ್ನಿಸಿದ್ದಾರೆ.
ಎನ್ಇಪಿಯಲ್ಲಿ ಆರ್ಎಸ್ಎಸ್ ಅಜೆಂಡಾ ಇದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಅವರು ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ ಪ್ರತ್ಯುತ್ತರ ನೀಡಿದರು.
ಹಿಂದಿ ಭಾಷೆಗೂ ಹೊಸ ಶಿಕ್ಷಣ ನೀತಿಗೂ ಯಾವುದೇ ಸಂಬಂಧ ಇಲ್ಲ. ಮೊದಲು ಸರಿಯಾಗಿ ಓದಿ ನಂತರ ವಿರೋಧಿಸಲಿ. ಅದನ್ನು ಬಿಟ್ಟು ಓದದೆ ವಿರೋಧಿಸಿದವರಿಗೆ ನಾವು ಏನು ಹೇಳುವ ಅವಶ್ಯಕತೆ ಇಲ್ಲ ಎಂದರು.
ಶಿಕ್ಷಕರನ್ನ ನೇಮಕಾತಿ ಮಾಡಿದ್ದು, ಮಕ್ಕಳಿಗೆ ಪಾಠ ಮಾಡಲಿಕ್ಕೆ ಹೊರತು, ಸಂಸಾರ ನೋಡಿಕೊಳ್ಳೋಕಲ್ಲ. ಅವರಿಗೆ ಮೊದಲೇ ಕೆಲಸಕ್ಕೆ ಸೇರುವಾಗ ಜಿಲ್ಲಾವಾರು ಆಯ್ಕೆ ಎಂದು ಗೊತ್ತಿರುತ್ತದೆ ಎಂದು ಶಿಕ್ಷಕರ ವರ್ಗಾವಣೆ ಕುರಿತು ಸುದ್ದಿಗಾರರ ಪ್ರಶ್ನೆಗೆ ನಾಗೇಶ್ ಉತ್ತರಿಸಿದರು.
ಮೂರು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಎರಡು ದಿನದಿಂದ ಮತ್ತೆ ಶುರುವಾಗಿದ್ದು, ಈಗ ಎಲ್ಲ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲ ಶಿಕ್ಷಕರು ವೈಯುಕ್ತಿಕ ಸಮಸ್ಯೆಗಳನ್ನ ಸಾಮೂಹಿಕ ಎಂದು ಹೇಳಲಾಗದು. ಎಲ್ಲರ ಸಮಸ್ಯೆ ಅರ್ಥ ಆಗುತ್ತದೆ. ಆದರೆ, ಶಿಕ್ಷಕರ ಸಮಸ್ಯೆಗಿಂತ ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ. ಬಳಿಕ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.
ಈ ವರ್ಷ ೫ ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಮುಂದೆ ಅಗತ್ಯವಿದ್ದಲ್ಲಿ ಮತ್ತಷ್ಟು ನೇಮಕಾತಿ ಪ್ರಕ್ರಿಯೆ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.
ಶಿಕ್ಷಣ ವ್ಯವಸ್ಥೆಗೆ ಕೋವಿಡ್ ಸವಾಲಾಗಿದ್ದು, ಕೇಂದ್ರ, ರಾಜ್ಯ ಸರ್ಕಾರ ಹೆಚ್ಚಿನ ನಿಗಾ ವಹಿಸುತ್ತಿದೆ. ಕೋವಿಡ್ ೩ನೇ ಅಲೆ ಪರಿಣಾಮ ಬೀರಿದರೆ ಶಾಲೆ ಮುಂದುವರೆಸುವುದಾ ಅಥವಾ ಬೇಡವಾ ಎಂದು ಆಮೇಲೆ ನಿರ್ಧಾರ ಮಾಡಲಾಗುತ್ತದೆ. ಸದ್ಯಕ್ಕೆ ಯಾವೂದೇ ತೊಂದರೆ ಇಲ್ಲದೇ ಶಾಲೆ ಪ್ರಾರಂಭ ಆಗಿದೆ ಎಂದರು.
ನೆರೆಯ ಕೇರಳದಿಂದ ಸೋಂಕು ಹರಡಿರುವ ಕಾರಣ ಕೊಡುಗು ಜಿಲ್ಲೆಯ ರೆಸಿಡೆನ್ಸಿ ಶಾಲೆಯ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ೪೫೦ ಮಕ್ಕಳನ್ನು ಟೆಸ್ಟ್ ಮಾಡಲಾಗಿದ್ದು, ೩೧ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಒಂದು ವಾರ ಕಾಲ ಶಾಲೆಯನ್ನು ಸೀಲ್ ಡೌನ್ ಮಾಡಲು ತಿಳಿಸಲಾಗಿದೆ. ನಾನ್ ರೆಸಿಡೆನ್ಸಿ ಶಾಲೆಯಲ್ಲಿ ಎಲ್ಲಿಯೂ ತೊಂದರೆ ಇಲ್ಲ ಎಂದು ಹೇಳಿದರು.