ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಶಾಲೆ ಪ್ರಾರಭಿಸಲು ಚಿಂತನೆ – ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ದಾವಣಗೆರೆ: ಮೂರ‍್ನಾಲ್ಕು ಗ್ರಾಮಗಳಿಗೆ ಅನುಕೂಲವಾಗುವಂತೆ ಒಂದು ಕಡೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, ಇಂತಹ ಶಾಲೆಯನ್ನು ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದರು.
ಚನ್ನಗಿರಿ ತಾಲ್ಲೂಕು ಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಶತಮಾನೋತ್ಸವ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಪೂರ್ಣ ಮಟ್ಟದ ಶಾಲೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, 2 ಕಿ.ಮೀ. ಗೂ ಹೆಚ್ಚು ದೂರವಿದ್ದರೆ, ಅಂತಹ ಕಡೆಗಳಲ್ಲಿ ಮಕ್ಕಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಹ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಬೆಳಲಗೆರೆ ಗ್ರಾಮದಲ್ಲಿ ಒಂದು ಕೋಟಿ ರೂ., ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶತಮಾನೋತ್ಸವ ಶಾಲಾ ಕಟ್ಟಡ ಉತ್ತಮವಾಗಿ ನಿರ್ಮಾಣಗೊಂಡಿದ್ದು, ನೀಡಿರುವ ಅನುದಾನ ಸಂಪೂರ್ಣವಾಗಿ ಸದ್ವಿನಿಯೋಗವಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಸುಮಾರು 48 ಸಾವಿರ ಶಾಲೆಗಳ ಪೈಕಿ, ಎಂಟು ಸಾವಿರ ಶಾಲೆಗಳಲ್ಲಿ ಕೊರತೆಗಳು ಹೆಚ್ಚಿವೆ. ರಾಜ್ಯದಲ್ಲಿ ಸುಮಾರು 3ಸಾವಿರ ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದರೂ ಸಹ ಶಾಲೆಗಳನ್ನು ನಡೆಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಹಣಮಾಡಲು ಶಾಲೆಗಳನ್ನು ನಡೆಸುತ್ತಿವೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಕಲಿಯುವುದು ಕೀಳರಿಮೆ ಎಂದು ಭಾವಿಸದೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಪ್ರೋತ್ಸಾಹಿಸಬೇಕು. ಇತ್ತೀಚೆಗೆ ನಡೆದ ಯು.ಪಿ.ಎಸ್.ಸಿ ಗೆ ಆಯ್ಕೆಯಾದ ರಾಜ್ಯದ 38 ಅಭ್ಯರ್ಥಿಗಳಲ್ಲಿ ಸುಮಾರು 20 ಅಭ್ಯರ್ಥಿಗಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತಿರುವುದು ಸರ್ಕಾರಿ ಶಾಲೆಗಳ ಮೌಲ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.
ಶೀಘ್ರದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಐದು ಸಾವಿರ ಶಿಕ್ಷಕರ ಭರ್ತಿಗೊಳಿಸಲಾಗುತ್ತದೆ. ಪ್ರತಿ ಶಾಲೆಯ ತರಗತಿಗಳಿಗೂ ವಿಷಯವಾರು ಶಿಕ್ಷಕರನ್ನು ಕೂಡ ನೇಮಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ನೂತನ ಶಿಕ್ಷಣ ನೀತಿ- ಸ್ಕೂಲ್ ಕಾಂಪ್ಲೆಕ್ಸ್ ಇದು ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ ಯೋಜನೆಯಾಗಿದ್ದು, ಇಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ತಾವು ಯಾವ ಕಾಲೇಜು, ಯಾವ ಕೋರ್ಸ್ಗೆ ಸೇರುತ್ತೇವೆ ಎಂಬುದನ್ನು ಅವರೇ ನಿರ್ಧರಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ಬದಲಾವಣೆ ಒಂದೇ ಬಾರಿ ಆಗುತ್ತದೆ ಎಂದಲ್ಲ, ಹಂತ ಹಂತವಾಗಿ ಬದಲಾವಣೆ ಆಗಲಿದೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ಈ ಮಾದರಿ ಶಾಲೆಯನ್ನು ಶಿಕ್ಷಣ ಸಚಿವರು ಉದ್ಘಾಟಿಸಿದ್ದು ಖುಷಿ ತಂದಿದೆ. ಕೇವಲ ಮಾದರಿ ಶಾಲೆಯಿದ್ದರೆ ಸಾಲದು ಮಾದರಿ ಶಿಕ್ಷಕರಿರಬೇಕು. ಆಗ ಮಾತ್ರ ಮಕ್ಕಳು ಶಾಲೆಗೆ ಸೇರಲು ಇಷ್ಟಪಡುತ್ತಾರೆ. ಶಿಕ್ಷಕರು ಮಕ್ಕಳ ಬಗೆಗೆ ಕಾಳಜಿ ವಹಿಸಬೇಕು. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಒಂದು ಶಾಲೆಯನ್ನು ಉಳಿಸಿ ಬೆಳೆಸುವುದು ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳ ಕೈಯಲ್ಲಿದೆ. ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನು ನೀಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ಪ ದೇವೀರಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ (ಅಭಿವೃದ್ಧಿ) ಹೆಚ್.ಕೆ. ಲಿಂಗರಾಜ್, ಬಿಇಒ ಕೆ. ಮಂಜುನಾಥ್, ಗಣ್ಯರಾದ ಅನಿತ್‌ಕುಮಾರ್, ಬಾತಿ ನಾಗರಾಜಪ್ಪ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು, ವಿವಿಧ ಅಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.