ಅಣಬೇರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಿಪ್ಪೇಸ್ವಾಮಿಯವರಿಂದ ಚುನಾವಣಾ ಪ್ರಚಾರ!

ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರು ಸ್ವಗ್ರಾಮ ಅಣಬೇರು ಸೇರಿದಂತೆ ವಿವಿಧ ಊರುಗಳಲ್ಲಿ ಪ್ರಚಾರ ನಡೆಸಿದರು. ದುಡಿಯುವ ಜನಗಳ, ರೈತ-ಕಾರ್ಮಿಕರ ಹೋರಾಟದ ಪ್ರತಿನಿಧಿಯಾಗಿ ಕಣಕ್ಕಿಳಿದಿರುವ ತಿಪ್ಪೇಸ್ವಾಮಿಯವರನ್ನು ಅಣಬೇರುವಿನ ಜನಗಳು ಪ್ರೀತಿ ಆದರದಿಂದ ಸ್ವಾಗತಿಸಿ ಬೆಂಬಲಿಸಿದರು. ಪ್ರಚಾರ ಸಭೆಯನ್ನು ಉದ್ದೇಶಿಸಿ ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಅಪರ್ಣಾ ಬಿ ಆರ್ ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ದೇಶದ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿಯು ದೇಶದ ರೈತರು ಕಾರ್ಮಿಕರು ಸೇರಿದಂತೆ ಜನ ಸಾಮಾನ್ಯರಿಗೆ ನೀಡಿದ ಎಲ್ಲ ಭರವಸೆಗಳನ್ನೂ ಗಾಳಿಗೆ ತೂರಿದೆ. ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ಡಬಲ್ ಮಾಡುವುದು, ಬೇಟಿ ಬಚಾವೋ ಮುಂತಾದ ಘೋಷಣೆಗಳೊಂದಿಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು, ಜನರಿಗೆ ದ್ರೋಹ ಬಗೆದು ಅಂಬಾನಿ, ಅದಾನಿ ಸೇರಿದಂತೆ ದೇಶದ ಬಂಡವಾಳಿಗರ ಸಂಪತ್ತನ್ನು ಹೆಚ್ಚಿಸುವ ನೀತಿಗಳನ್ನು ಜಾರಿಗೊಳಿಸಿದ್ದಾರೆ. ರೈತರ ಬದುಕನ್ನು ಬೀದಿಗೆ ತಳ್ಳಿ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾರಿ ಎರೆಯಲು ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳು, ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕುವ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಸರ್ಕಾರಿ ಶಾಲೆಗಳನ್ನು ಮುಚ್ಚಿ ಶಿಕ್ಷಣವನ್ನು ಉಳ್ಳವರಿಗಷ್ಟೇ ಸೀಮಿತವಾಗಿಸುವ ಕರಾಳ ಎನ್‌ಈಪಿ-2020 ಮುಂತಾದವು ಮೋದಿ ಸರ್ಕಾರದ ದ್ರೋಹದ ಕಿರೀಟಕ್ಕೆ ಸಿಕ್ಕಿಸಿರುವ ಸಾಧನೆಯ ಗರಿಗಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ತನ್ನ 60 ವರ್ಷಗಳ ದುರಾಡಳಿತದಿಂದ ಜನಾಕ್ರೋಶಕ್ಕೆ ಬಲಿಯಾಗಿರುವ ಕಾಂಗ್ರೆಸ್ಸು ಕೂಡ ತನ್ನ ಆಡಳಿತ ಅವಧಿಯಲ್ಲಿ ಬಂಡವಾಳಿಗರ ಸೇವಕನಾಗಿ ಕೆಲಸ ಮಾಡಿದೆ.

ಇಂತಹ ಪರಿಸ್ಥಿತಿಯಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವು ದೇಶದವ್ಯಾಪಿ ಏಕಾಂಗಿಯಾಗಿ 151 ಹೋರಾಟಗಾರರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದೆ.
ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಅಣಬೇರು ತಿಪ್ಪೇಸ್ವಾಮಿಯವರು ಜನ ಹೋರಾಟವನ್ನೇ ತಮ್ಮ ಬದುಕಿನ ಧ್ಯೇಯವನಾಗಿಸಿಕೊಂಡಿದ್ದಾರೆ. ಬಂಡವಾಳಶಾಹಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ಸಿನ ಕಾರಪೋರ ರಾಜಕೀಯವನ್ನು ಜನರು ತಿರಸ್ಕರಿಸಬೇಕು ಮತ್ತು ಉನ್ನತ ನೀತಿ-ಸಂಸ್ಕೃತಿಯ ಆಧಾರದ ರಾಜಕೀಯ ನಡೆಸುವ ಅಭ್ಯರ್ಥಿ ತಿಪ್ಪೇಸ್ವಾಮಿಯವರನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಅವರು ಜನರಲ್ಲಿ ಮನವಿ ಮಾಡಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಮಧು ತೊಗಲೇರೆ ಮಾತನಾಡಿ, ನಮ್ಮ ಅಭ್ಯರ್ಥಿಯು ಗೆದ್ದು ಬಂದರೆ ಇಂದು ನಮ್ಮ ಪಕ್ಷವು ಸಂಘಟಿಸುತ್ತಿರುವ ರೈತ-ಕಾರ್ಮಿಕರ ಹೋರಾಟದ ಕೂಗನ್ನು ಲೋಕಸಭೆಯಲ್ಲಿ ಮೊಳಗಿಸುತ್ತಾರೆ ಎಂದು ಹೇಳಿದರು. ಕ್ಷೇತ್ರದ ಎಲ್ಲೆಡೆ ವಿದ್ಯಾರ್ಥಿ, ಯುವಜನ ರೈತ ಕಾರ್ಮಿಕರು ಸ್ವಯಂಪ್ರೇರಣೆಯಿಂದ ಅಣಬೇರು ತಿಪ್ಪೇಸ್ವಾಮಿಯವರ ಪರವಾಗಿ ಪ್ರಚಾರ ನಡೆಸಿ ತಿಪ್ಪೇಸ್ವಾಮಿಯವರ ಕ್ರಮ ಸಂಖ್ಯೆ 5 ಆಟೋ ರಿಕ್ಷಾ ಗುರುತಿಗೆ ಮತ ನೀಡುವಂತೆ ಜನರ ಮನವೊಲಿಸುತ್ತಿದ್ದಾರೆ. ಕ್ಷೇತ್ರದ ಜನರು ಇದಕ್ಕೆ ಸ್ಪಂದಿಸಿ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುವುದರ ಮೂಲಕ ಹೋರಾಟಗಾರ ಅಭ್ಯರ್ಥಿ ತಿಪ್ಪೇಸ್ವಾಮಿಯವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಕೈದಾಳೆ, ಪರಶುರಾಮ್, ಮಹಾಂತೇಶ್ ಅನೀಲ್ ಸೇರಿದಂತೆ ಪಕ್ಷದ ಸದಸ್ಯರು ಅಭ್ಯರ್ಥಿಯ ಸ್ನೇಹಿತರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಹೋರಾಟದ ರಾಜಕೀಯವನ್ನು ಬೆಂಬಲಿಸಿ ಜನರು ಸಭೆಯ ನಂತರ ಪಕ್ಷಕ್ಕೆ ದೇಣಿಗೆ ನೀಡಿದರು ಮತ್ತು ಪಕ್ಷದ ಚಿಂತನೆಗಳನ್ನು ಉತ್ಸಾಹದಿಂದ ಸ್ವೀಕರಿಸಿ ಬೆಂಬಲಿಸಿದರು.

Leave a Reply

Your email address will not be published. Required fields are marked *

error: Content is protected !!