Ex cm jh patel school: ಮಾಜಿ ಸಿಎಂ ಜೆ ಹೆಚ್ ಪಟೇಲ್ ಓದಿದ ಶಾಲಾ ಕಟ್ಟಡ ಇದೀಗ ಶಿಥಿಲಾವಸ್ಥೆ.! ಮಾಜಿ ಮೇಯರ್ ಉಮಾ ಪ್ರಕಾಶ್ ಶಾಲೆಗೆ ಭೇಟಿ

ದಾವಣಗೆರೆ: ದಾವಣಗೆರೆ ನಗರದ ಮಾಜಿ ಪುರಸಭೆ ಪ್ರೌಢಶಾಲೆ ಮತ್ತು ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಅಧ್ಯಾಪಕರು ಭೇಟಿಮಾಡಿ ಶಾಲೆ-ಕಾಲೇಜಿಗೆ ಮಹಾನಗರ ಪಾಲಿಕೆಯಿಂದ ಕಾಂಪೌಂಡ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಕೇಳಿ ಕೊಂಡಿದ್ದರಿಂದ ಮಾಜಿ ಮಹಾಪೌರರಾದ ಮತ್ತು ಮಹಾನಗರ ಪಾಲಿಕೆ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾ ಪ್ರಕಾಶ್ ರವರು ಮತ್ತು 19ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶಿವಪ್ರಕಾಶ್ ಅವರು ಮತ್ತು ವಾರ್ಡಿನ ಇಂಜಿನಿಯರ್ ಆದ ಸತೀಶ್ ನಾಯಕ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಸಚಿನ್ ಅವರೊಂದಿಗೆ ಭೇಟಿ ನೀಡಿದರು.

ಶಾಲೆ ಆವರಣದಲ್ಲಿ ಪೊಲೀಸರು ಬಂದಿರುವುದನ್ನು ಕಂಡು ಶಾಲಾ ಪ್ರಾಚಾರ್ಯ ಸುರೇಶ್ ಅವರನ್ನು ಕೇಳಿದಾಗ ಶಾಲೆಯಲ್ಲಿ ನಿನ್ನೆ ಮತ್ತು ಮೊನ್ನೆ ಕಳ್ಳತನವಾಗಿರುವುದರಿಂದ ದೂರು ನೀಡಿದ್ದು, ಆದ್ದರಿಂದ ಪೊಲೀಸರು ಬಂದಿರುವುದಾಗಿ ಹೇಳಿದರು. ಮತ್ತು ಶಾಲೆಯ ಆವರಣದಲ್ಲಿ ಬೇಕಾದ ಸೌಲಭ್ಯಗಳ ಬಗ್ಗೆ ಸ್ಥಳ ಪರಿಶೀಲನೆಗೆ ಮನವಿ ಮಾಡಿದರು. ಆವರಣದಲ್ಲಿ ಸುತ್ತಾಡಿ ನೋಡಿದಾಗ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿರುವುದು ಸೇರಿದಂತೆ ಹಲವು ಕುಂದುಕೊರತೆಗಳು ಗಮನಕ್ಕೆ ಬಂದಿರುತ್ತವೆ. ಪ್ರಾಚಾರ್ಯರು ಮತ್ತು ಸಿಬ್ಬಂದಿಗಳು ಶಾಲೆಯ ಕಾಂಪೌಂಡ್ ಎತ್ತರಿಸುವಂತೆ ಕ್ರಮಕೈಗೊಳ್ಳಲು ಕೇಳಿಕೊಂಡರು.

ಅಲ್ಲದೆ ಈ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜೆ ಎಚ್ ಪಟೇಲರು ಸೇರಿದಂತೆ ಅನೇಕ ಹೆಸರಾಂತ ವ್ಯಕ್ತಿಗಳು ವಿದ್ಯಾಭ್ಯಾಸ ಮಾಡಿರುವುದಾಗಿ ತಿಳಿಸಿದರು. ಸ್ಮಾರ್ಟ್ ಸಿಟಿಯಿಂದ ಕಂಪ್ಯೂಟರ್‌ಗಳನ್ನು ಒದಗಿಸಿದ್ದು ವಿವಿಧ ಅನುದಾನ ಗಳಿಂದ ಆವರಣದಲ್ಲಿ ಕೊಠಡಿಗಳ ಕಾಮಗಾರಿ ನಡೆಯುತ್ತಿದ್ದು ಅದನ್ನು ವೀಕ್ಷಿಸಿದರು. ಈ ಶಾಲೆ ಮತ್ತು ಕಾಲೇಜಿನಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಬಡ ಕುಟುಂಬ ವರ್ಗಗಳಿಂದ ಬಂದಿರುತ್ತಾರೆ. ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಶಾಲೆಯಲ್ಲಿ ಬೇಕಾದ ಸವಲತ್ತುಗಳ ಬಗ್ಗೆ ಪ್ರಾಚಾರ್ಯ ಸುರೇಶ್ ರವರು ಕೋರಿಕೊಂಡರು. ಅದಕ್ಕೆ ಸ್ಪಂದಿಸಿದ ಶ್ರೀಮತಿ ಉಮಾ ಪ್ರಕಾಶರವರು ಮತ್ತು ಪಾಲಿಕೆ ಸದಸ್ಯರಾದ ಶಿವಪ್ರಕಾಶ್ ಅವರು ಜೆ ಹೆಚ್ ಪಟೇಲರ ಜನ್ಮದಿನವೂ ಇರುವುದರಿಂದ ಕಾಂಪೌಂಡ್ ಎತ್ತರಿಸಿ ಕೊಡುವುದಾಗಿ ಹೇಳಿದರು.

ಸ್ಥಳದಲ್ಲಿದ್ದ ಇಂಜಿನಿಯರುಗಳಿಗೆ ಕಾಂಪೌಂಡ ನಿರ್ಮಿಸಲು ಬೇಕಾಗುವ ಅಂದಾಜು ವೆಚ್ಚದ ಯೋಜನೆಯನ್ನು ತಯಾರಿಸುವಂತೆ ಆದೇಶಿಸಿದರು. ಅಲ್ಲದೆ ಪ್ರಾಚಾರ್ಯರಿಗೆ ಶಾಲೆಯಲ್ಲಿ ಅಲ್ಪಸಂಖ್ಯಾತ ಮಕ್ಕಳು ಹೆಚ್ಚಾಗಿರುವುದರಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದಲೂ ಸಹ ಅನುದಾನವನ್ನು ಸರ್ಕಾರದಿಂದ ಕೊಡಿಸುವಂತೆ ಒತ್ತಾಯಿಸಲು ಈ ಭಾಗದ ಶಾಸಕರು ಹಿರಿಯರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರನ್ನು ಕಂಡು ಮನವಿ ಮಾಡಲು ಸೂಚಿಸಿದರು.
ಮುಂದಿನ ದಿನಗಳಲ್ಲಿಯೂ ಸಹ ಮಹಾನಗರ ಪಾಲಿಕೆಯಿಂದ ನಾಗರಿಕ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು. ಅಲ್ಲದೆ ಈ ಭಾಗದ ಸದಸ್ಯರೊಡಗೂಡಿ ಲೋಕಸಭಾ ಸದಸ್ಯರಾದ ಶ್ರೀ ಜಿಎಂ ಸಿದ್ದೇಶ್ವರ ಅವರನ್ನು ಕಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವಂತೆ ಕೋರಿಕೊಳ್ಳುವುದಾಗಿ ತಿಳಿಸಿದರು.
