ಕಾರ್ಯಪಾಲಕ ಎಂಜಿನಿಯರ್ ಲಷ್ಕರಿ ನಾಯ್ಕಗೆ 3 ವರ್ಷ ಜೈಲು, 1.25 ಕೋಟಿ ರೂ. ದಂಡ
ದಾವಣಗೆರೆ : ಹರಪನಹಳ್ಳಿ ತಾಲ್ಲೂಕು ಲಕ್ಷ್ಮೀಪುರ ಗ್ರಾಮದ, ಕೊಪ್ಪಳದಲ್ಲಿ ಕಾರ್ಯಪಾಲಕ ಇಂಜಿನಿಯರ್ ಆಗಿದ್ದ ಹೆಚ್.ಲಷ್ಕರಿ ನಾಯ್ಕ ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1.25 ಕೋಟಿ ರೂ. ದಂಡದ ಶಿಕ್ಷೆ ವಿಧಿಸಿ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್.ಹೆಗಡೆ ತೀರ್ಪು ನೀಡಿದ್ದಾರೆ.
ಲೋಕಾಯುಕ್ತ ಪೊಲೀಸರು ಲಷ್ಕರಿ ನಾಯ್ಕ ಅವರು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂದು ದೂರು ದಾಖಲಿಸಿಕೊಂಡು ಹಿಂದಿನ ಇನ್‌ಸ್ಪೆಕ್ಟರ್ ಸುಧೀರ್ ಎಂ. ಹೆಗಡೆ ಅವರು ವರದಿ ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು, ಲಷ್ಕರಿ ನಾಯ್ಕ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ನಂತರ ಪ್ರಕರಣದ ಹಿಂದಿನ ಇನ್‌ಸ್ಪೆಕ್ಟರ್ ಗುರುದತ್, ರಾಮಚಂದ್ರ ಬೆಂತೂರ್ ಅವರು ತನಿಖೆ ಮಾಡಿದ ನಂತರ ಹಿಂದಿನ ಡಿ.ಎಸ್.ಪಿ. ಕೆ.ಎಂ. ಬಸವರಾಜ್ ಅವರು ಆರೋಪಿತ ಲಷ್ಕರಿ ನಾಯ್ಕ ಅವರು ಶೇ.593.64ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
ವಿಶೇಷ ಲೋಕಾಯುಕ್ತ ನ್ಯಾಯಾಧೀಶರು ವಿಚಾರಣೆ ಮಾಡಿ ಜನವರಿ 23ರಂದು ಲಷ್ಕರಿನಾಯ್ಕ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಪಿ.ವೈ. ಹಾದಿಮನಿ ಲೋಕಾಯುಕ್ತರ ಪರ ವಾದ ಮಂಡಿಸಿದ್ದರು.