ದತ್ತು ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರೈಸಿ ಪೋಕ್ಸೋ, ಬಾಲ್ಯ ವಿವಾಹ ನಿಷೇಧ ಕಾಯಿದೆ ಕುರಿತು ಜಾಗೃತಿ ಹೆಚ್ಚಿಸಲು ಸೂಚನೆ

ದಾವಣಗೆರೆ : ಅನಾಥವಾಗಿರುವ ಮಕ್ಕಳನ್ನು ಹೆಚ್ಚು ದತ್ತು ಪ್ರಕ್ರಿಯೆಗೆ ಒಳಪಡಿಸಲು ಹಾಗೂ ಈ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ   ಪೂರ್ಣಗೊಳಿಸಲು ಮಕ್ಕಳ ರಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚನೆ ನೀಡಿದರು.

ಮಂಗಳವಾರ (ಅ.22) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಪೋಕ್ಸೋ ಪ್ರಕರಣದಲ್ಲಿ ದಾಖಲಾಗಿರುವ ಮಕ್ಕಳಿಗೆ ನ್ಯಾಯ ಒದಗಿಸಲು ಆರೋಪಿಗಳ ವಿರುದ್ದ ತಕ್ಷಣ ಎಫ್.ಐ.ಆರ್ ದಾಖಲಿಸಬೇಕು. ಜಿಲ್ಲೆಯಲ್ಲಿ ಸಂಕಷ್ಟಗಳಿಗೆ ಒಳಗಾದ ಮಕ್ಕಳನ್ನು ಅನಾಥ, ಏಕ ಪೋಷಕ, ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗಳಿಗೆ ದಾಖಲಿಸಿ, ಅವರ ವಿಧ್ಯಾಭ್ಯಾಸ ಮುಂದುವರಿಸುವಂತೆ ಕ್ರಮವಹಿಸುವ ಜೊತೆಗೆ ಪ್ರಗತಿಯ ಬಗ್ಗೆ  ಪರಿಶೀಲನೆ ಮಾಡಬೇಕು. ಬಾಲನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಾಕಿ ಇರುವ ಮಕ್ಕಳ ಎಲ್ಲಾ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಇತ್ಯರ್ಥಗೊಳಿಸುವಂತೆ ತಿಳಿಸಿದರು.

ಬಾಲ್ಯವಿವಾಹ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ದೂರು ದಾಖಲಿಸಬೇಕು. ಜಿಲ್ಲೆಯಲ್ಲಿ ಮಕ್ಕಳ ಸಮಸ್ಯೆಗಳು ಹೆಚ್ಚಾಗುತ್ತಿರುವುದರಿಂದ ಈ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಾಗೂ ಜಾಗೃತಿ ಮೂಡಿಸಬೇಕು.  ಬಾಲಕಾರ್ಮಿಕ, ಮಕ್ಕಳ ಸಾಗಾಣಿಕೆ ಹಾಗೂ ಮಕ್ಕಳು ಕಾಣೆಯಾಗುತ್ತಿರುವ ಮಾಹಿತಿಯ ಕರೆ ಮಕ್ಕಳ ಸಹಾಯವಾಣಿಗೆ ಬಂದ ತಕ್ಷಣ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಪಡೆದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಿಗೆ ನೀಡಬೇಕು. ಶಿಕ್ಷಣ ಇಲಾಖೆಯಿಂದ  ಶಾಲೆ ಬಿಟ್ಟಂತಹ ಮಕ್ಕಳನ್ನು ಗುರುತಿಸಿ ಮರು ಶಾಲೆಗೆ ದಾಖಲಿಸಲು ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ಪ್ರಕರಣಗಳ ಮಾಹಿತಿ ಬಂದ ಕೂಡಲೇ ನಿಯಮಾನುಸಾರ ಕ್ರಮ ಕೈಗೊಳ್ಳಲು ಮತ್ತು ಅವಶ್ಯಕತೆ ಇರುವ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಹಾಗೂ ಶಾಲೆಗೆ ದಾಖಲಿಸಲು ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿಗಳಿಗೆ ತಿಳಿಸಿದರು.
ಎಲ್ಲಾ ಇಲಾಖೆ ಅಧಿಕಾರಿಗಳು ಸಹ ಸಂಕಷ್ಟಗಳಿಗೆ ಒಳಗಾದ ಮಕ್ಕಳಿಗೆ ಪೋಷಣೆ, ರಕ್ಷಣೆ, ಒದಗಿಸಲು ಸಹಭಾಗಿತ್ವ ಮತ್ತು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಧಿಕಾರಿಗಳು ಮಕ್ಕಳ ಕ್ಷೇತ್ರ, ಕಾರ್ಯದ ವಿಷಯದಲ್ಲಿ ಬೇಜವ್ದಾರಿತನ ಮತ್ತು ನಿರ್ಲಕ್ಷ್ಯತನ ತೋರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಎಂ. ಸಂತೋಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ, ಪಾಲಿಕೆ ಆಯುಕ್ತರಾದ ರೇಣುಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!