Extortion: ಸಂಘಟನೆಯ ರಾಜ್ಯಾದ್ಯಕ್ಷ ಸೇರಿ ಇಬ್ಬರ ಬಂಧನ, ಓರ್ವ ಮಹಿಳೆ ನಾಪತ್ತೆ: ಕಾರಣ ಕೇಳಿದ್ರೆ ದಂಗಾಗ್ತೀರಾ.!

ದಾವಣಗೆರೆ: ಸಂಘಟನೆಯ ಹೆಸರಲ್ಲಿ‌ ಜನರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿ ಹಣ ಪೀಕುವ ಸಂಘಟನೆಗಳಿಗೇನು ಕಡಿಮೆಯಿಲ್ಲ. ಈಗ ಇಂತಹದ್ದೇ ಹಣ ಮಾಡಲು ಹೊರಟ ಮತ್ತೊಂದು ಸಂಘಟನೆಯ  ಸದಸ್ಯರು ಪೊಲೀಸರ ಅತಿಥಿಗಳಾಗಿದ್ದಾರೆ!

ಸಂಘಟನೆಯ ರಾಜ್ಯಾಧ್ಯಕ್ಷ, ಸದಸ್ಯರ ಹೆಸರೇಳಿಕೊಂಡಿರುವ ಸಂಘಟನೆಯ ಕೆಲವು ಪದಾಧಿಕಾರಿಗಳು ಇಂತಹ ಕೃತ್ಯಕ್ಕೆ ಮುಂದಾಗಿದ್ದು, ಯುವತಿಯೊಬ್ಬಳ ಸಮಸ್ಯೆಯನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಿ, ಲಕ್ಷಾಂತರ ಹಣ ಹೊಡೆಯಲು ಮುಂದಾಗಿದ್ದರಿಂದ ಅವರ ವಿರುದ್ಧ ನೊಂದ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಭಿ, ಅರವಿಂದಾಕ್ಷ, ಮಾಲಾ ನಾಗರಾಜ್,  ಎನ್ನುವವರ ವಿರುದ್ಧ ನೊಂದ ಕಿರಣ್ ಕುಮಾರ್ ದೂರು ದಾಖಲಿಸಿದ್ದಾರೆ.

ದಾವಣಗೆರೆಯ ವಿಮೆ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿರುವ ಕಿರಣ್ ಕುಮಾರ್  ಅವರು ಯುವತಿಯೋರ್ವಳಿಗೆ ಅದೇ ಕಂಪನಿಯಲ್ಲಿ ಕೆಲಸ ಕೊಟ್ಟಿದ್ದರು. ಆಕೆ ಸ್ವಲ್ಪ ದಿನಗಳ ಬಳಿಕ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದಾಳೆ. ವಿವಾಹಿತರಾಗಿರುವ ಕಿರಣ್ ಕುಮಾರ್ ಅಸಮ್ಮತಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ.

ಈ ವಿಷಯವನ್ನು ಕಿರಣ್ ಕುಮಾರ್ ಆಕೆಯ ತಂದೆ-ತಾಯಿ ಬಳಿ ತಿಳಿಸಿದ್ದು, ಅವರು ಯುವತಿಗೆ ಬೈದಾಡಿ ಸುಮ್ಮನಿರಿಸಿದ್ದಾರೆ. ಇದಾದ ಬಳಿಕ ಪ್ರಕರಣದ ಕುರಿತು ಮಧ್ಯಸ್ಥಿಕೆ ವಹಿಸಲು ಸಂಘಟನೆಯೊಂದರ ಮಾಲಾ ನಾಗರಾಜ್ ಎಂಬುವರು ಬಂದಿದ್ದು, ಅವರ ಮುಂದೆ ಯುವತಿಯು ಕಿರಣ್ ಕುಮಾರ್ ತಮ್ಮನ್ನು ಬಳಸಿಕೊಂಡಿದ್ದರು ಎಂದು ಹೇಳಿಕೆ‌ ನೀಡಿದ್ದಾಳೆ.

ಇದರಿಂದ ಕಿರಣ್ ಕುಮಾರ್ ಅವರ ಬಳಿ ಮಾಲಾ‌ ನಾಗರಾಜ್ ಖಾಲಿ ಚೆಕ್ ಒಂದಕ್ಕೆ ಸಹಿ‌ ಮಾಡಿಸಿಕೊಂಡು ಒಂದು ವಾರದೊಳಗಾಗಿ ₹10 ಲಕ್ಷ ಹಣ ಹಾಕದಿದ್ದರೆ ಮಾನ ಮರ್ಯಾದೆ ಹರಾಜು ಹಾಕುವುದಾಗಿ ಬೆದರಿಕೆ ಯೊಡ್ಡಿದ್ದಾರೆ.

ಇವರೊಂದಿಗಿದ್ದ ಅಭಿ ಎನ್ನುವವರು ಕೂಡಲೇ10 ಸಾವಿರ ಹಣ ನೀಡುವಂತೆ ಹಲ್ಲೆ ಮಾಡಿದ್ದಾನೆ. ಈ ಕುರಿತು ಕಿರಣ್ ಕುಮಾರ್ ತಾವು ನಿರಪರಾಧಿಯಾಗಿದ್ದು, ತಮ್ಮ ಮೇಲೆ ಹಲ್ಲೆ ನಡೆಸಿ ಹಣ ಕೀಳಲು ಮುಂದಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ತಂಡ ಅಭಿ ಹಾಗೂ ಅರವಿಂದಾಕ್ಷ ಎಂಬುವವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಸದ್ಯ ಮಾಲಾ ನಾಗರಾಜ್ ರನ್ನ ಪೊಲಿಸ್ ಹುಡುಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!