ಅತ್ಯಂತ ನೀರಸ, ಅಭಿವೃದ್ಧಿಯ ವಿರೋಧಿ, ದೂರದೃಷ್ಟಿ ಇಲ್ಲದ ಬಜೆಟ್: ಎಸ್ಸೆಸ್, ಎಸ್ಸೆಸ್ಸೆಂ
ದಾವಣಗೆರೆ: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಬಜೆಟ್ ಅತ್ಯಂತ ನೀರಸ, ಅಭಿವೃದ್ಧಿಯ ವಿರೋಧಿ, ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ ಎಂದು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ.
ಬಸವರಾಜ ಬೊಮ್ಮಾ¬ ತಮ್ಮ ಮಾತುಗಳ ಮೂಲಕ ಜನರಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ್ದರು. ‘ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ’, ಭವಿಷ್ಯಕ್ಕಾಗಿ ಧೃಡ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದನ್ನು ಮರೆತು ಆದರೆ ಬಜೆಟ್ ನೋಡಿದ ಮೇಲೆ ಅವರ ಮಾತುಗಳು ಹುಸಿಯಾಗಿವೆ ಎಂದಿದ್ದಾರೆ.
ದಾವಣಗೆರೆ ಜಿಲ್ಲೆಯನ್ನು ಸ್ವರ್ಗ ಮಾಡುತ್ತೇವೆ ಎನ್ನುತ್ತಿದ್ದ ದಾವಣಗೆರೆ ಮುಖಂಡರು ಕೇವಲ ವಿಮಾನ ನಿಲ್ದಾಣಕ್ಕೆ ಮತ್ತು ಎಸ್ ಡಿಆರ್ ಎಫ್ ಗೆ ರೂಪುರೇಷೆ ತಯಾರಿಸಲು ಅನುಮತಿ ಅಷ್ಟೇ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅತಿಹೆಚ್ಚು ಮೆಕ್ಕೆಜೋಳ ಬೆಳೆದರೂ ಸಹ ಪಕ್ಕದ ಜಿಲ್ಲೆಗೆ ಮೆಕ್ಕೆಜೋಳ ಅಭಿವೃದ್ಧಿ ಸಂಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ನೀರಾವರಿ ಬಗ್ಗೆ ಬಹಳ ಮಾತಾಡುತ್ತಿದ್ದರು. ಬಜೆಟ್ ನಲ್ಲಿ ಇಟ್ಟಿರುವ ಹಣ ರೂ. 20,601 ಕೋಟಿ. ನಮ್ಮ ಬಜೆಟ್ ಗಾತ್ರ ರೂ. 2.02 ಲಕ್ಷ ಕೋಟಿ, ಈಗಿನ ಬಜೆಟ್ ಗಾತ್ರ ರೂ. 2.65 ಲಕ್ಷ ಕೋಟಿ. ಬಿಜೆಪಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀರಾವರಿಗೆ ಐದು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡ್ತೀವಿ ಎಂದಿದ್ದರು. ಅಂದರೆ ಈ ವರ್ಷ ಕನಿಷ್ಠ ರೂ. 30,000 ಕೋಟಿಯಾದರೂ ಇಡಬೇಕಲ್ವ? ಈವರೆಗೆ ಬಿಜೆಪಿ ಸರ್ಕಾರ ಖರ್ಚು ಮಾಡಿರುವುದು ಸುಮಾರು ರೂ. 40,000 ಕೋಟಿ. ಈ ವರ್ಷದ 20,000 ಕೋಟಿ ರೂಪಾಯಿ ಸೇರಿಸಿದ್ರೂ ರೂ. 60,000 ಕೋಟಿ ಆಗುತ್ತೆ. ಸಾಕ? ಹಿಂದೆ ನಮ್ಮ ಸರ್ಕಾರ ಇದ್ದಾಗ ಗೋವಿಂದ ಕಾರಜೋಳ ನೀರಾವರಿ ಬಗ್ಗೆ ಭಾಷಣ ಮಾಡುವಾಗ ನೀರಾವರಿ ಕನಿಷ್ಠ ರೂ. 25,000 ಕೋಟಿ ಇಡಿ ಎನ್ನುತ್ತಿದ್ದರು. ಈಗ ಏನಂತಾರೆ ಎಂದು ಪ್ರಶ್ನಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಗೆ ನಾವು ಹಣ ಮೀಸಲಿಡುತ್ತಿದ್ದೆವು. ನಮ್ಮ ಸರ್ಕಾರದ ಕಡೇ ಬಜೆಟ್ ನಲ್ಲಿ ಈ ವರ್ಗದವರಿಗೆ ರೂ. 29,000 ಕೋಟಿಗೂ ಅಧಿಕ ಅನುದಾನ ನೀಡಲಾಗಿತ್ತು. ಬಿಜೆಪಿ ಸರ್ಕಾರ ನಾಲ್ಕು ವರ್ಷದ ನಂತರ ಕೂಡ ರೂ. 28,000 ಕೋಟಿಯಲ್ಲೇ ಇದೆ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ನೀಡುವ ಹಣ ಕೂಡ ಹೆಚ್ಚಾಗಬೇಕು ಈ ಸಲದ ಬಜೆಟ್‍ನಲ್ಲಿ ಕನಿಷ್ಟ ರೂ. 40,000 ಕೋಟಿ ಆದರೂ ಆಗಬೇಕಿತ್ತು. ಹಿಂದುಳಿದ ಜಾತಿಗಳ ಕಲ್ಯಾಣದ ಅನುದಾನ ಕಡಿಮೆಯಾಗಿದೆ, ಇನ್ನು ಅಲ್ಪಸಂಖ್ಯಾತರ ಹೆಸರೇ ಹೇಳದ ಬಿಜೆಪಿ ದೀನದಯಾಳು ಉಪಾಧ್ಯಾಯ ಅವರ ಹೆಸರಿನಲ್ಲಿ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಮಾಡುವುದಾಗಿ ಹೇಳಿದ್ದಾರೆ, ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. 200 – 300 ಮಕ್ಕಳ ಹಾಸ್ಟೆಲ್ ಮಾಡಿದರೆ ಅದೇ ದೊಡ್ಡದು. ನಾಲ್ಕು ಕಡೆ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಮಾಡ್ತೀವಿ ಎಂದಿದ್ದಾರೆ, ಇದು ಅವಾಸ್ತವಿಕ ಮತ್ತು ಅಸಾಧ್ಯವಾದ ಕೆಲಸ ಎಂದಿದ್ದಾರೆ.
ಈಗ ರಾಜ್ಯದಲ್ಲಿರುವ ಬರಡು ದನಗಳನ್ನು ಗೋಶಾಲೆಗೆ ಕಳುಹಿಸಿದರೆ ಕನಿಷ್ಠ 500 ಗೋಶಾಲೆಗಳ ಅಗತ್ಯ ಇದೆ. ಇದನ್ನು ಮಾಡದಿದ್ದರೆ ಉತ್ತರ ಪ್ರದೇಶದಲ್ಲಿ ಆದಂತೆ ಬೀದಿ ಬೀದಿಯಲ್ಲಿ ದನಗಳು ಇರುತ್ತವೆ. ಪುಣ್ಯಕೋಟಿ ಹೆಸರಿನಲ್ಲಿ ಗೋವುಗಳನ್ನು ದತ್ತು ಪಡೆಯುವವರಿಗೆ ಸರ್ಕಾರ ರೂ. 11,000 ಕೊಡುವುದಾಗಿ ಹೇಳಿದೆ, ಈ ಹಣವನ್ನು ರೈತರಿಗೇ ಕೊಟ್ಟಿದ್ದರೆ ಅವರೇ ಸಾಕ್ತಿದ್ದರು. ಇದರಿಂದ ಜಾನುವಾರುಗಳ ಮಾಲಿಕರಾದ ರೈತರಿಗೆ ಅನ್ಯಾಯ ಆಗುತ್ತದೆ ಎಂದು ವಿಷಾದಿಸಿದ್ದಾರೆ.