ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ಸೌಲಭ್ಯ: ಫಲಾನುಭವಿಗಳ ತ್ವರಿತ ಆಯ್ಕೆಗೆ ಡಿಸಿ ಸೂಚನೆ
ದಾವಣಗೆರೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿವಿಧ ನಿಗಮಗಳಡಿ ಒದಗಿಸಲಾಗುವ ಸರ್ಕಾರಿ ಸೌಲಭ್ಯಗಳಿಗೆ ವಿತರಣೆಗೆ ಬಾಕಿ ಇರುವ ಆಯ್ಕೆ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ಘಟಕ ಯೋಜನೆ ಹಾಗೂ ಬುಡಕಟ್ಟು ಉಪಯೋಜಯಡಿ ಈ ಆರ್ಥಿಕ ವರ್ಷದಲ್ಲಿ ನಿಗಧಿಪಡಿಸಿದ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಬಳಸಬೇಕು. ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ಮಾಹೆಯಲ್ಲಿ ಇರುವುದರಿಂದ ಕೂಡಲೇ ಬಾಕಿ ಉಳಿದಿರುವ ಅನುದಾನದ ಬಳಕೆ ಮಾಡಲು ಸೂಚನೆ ನೀಡಿದರು. ಎಲ್ಲ ಇಲಾಖೆ ಅಧಿಕಾರಿಗಳು ಆಯಾ ವರ್ಷದಲ್ಲಿ ಪ.ಜಾತಿ ಮತ್ತು ಪ.ವರ್ಗದವರಿಗೆ ಮೀಸಲಿರುವ ಅನುದಾನವನ್ನು ಆಯಾ ವರ್ಷದೊಳಗೆ ಕಡ್ಡಾಯವಾಗಿ ಖರ್ಚು ಮಾಡಬೇಕು. ಈಗಾಗಲೆ ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ಅವಧಿ ಅಂದರೆ ಡಿಸೆಂಬರ್ ತಿಂಗಳಾಂತ್ಯದಲ್ಲಿದ್ದು, ನಿಗದಿಪಡಿಸಿದ ಅನುದಾನವನ್ನು ಅದೇ ಉದ್ದೇಶಕ್ಕೆ ಖರ್ಚು ಮಾಡಬೇಕು. ಮಾರ್ಚ್ ಬರುವವರೆಗೂ ಕಾಯದೆ, ಕೂಡಲೆ ಯೋಜನೆಗಳ ಅನುಷ್ಠಾನ ಪೂರ್ಣಗೊಳಿಸಬೇಕು ಎಂದರು.
ವಿಶೇಷ ಘಟಕ ಹಾಗೂ ಬುಡಕಟ್ಟು ಉಪಯೋಜನೆಯಡಿ ಇಲಾಖಾವಾರು ನಿಗದಿಪಡಿಸಿದ ಅನುದಾನವನ್ನು ಕಲಾಮಿತಿಯೊಳಗೆ ವೆಚ್ಚ ಮಾಡಬೇಕು. ಈ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ತೊಡಕುಗಳು ಹಾಗೂ ಬದಾಲಾವಣೆಗಳಿದ್ದಲ್ಲಿ ಲಿಖಿತವಾಗಿ ಮಾಹಿತಿ ನೀಡದ್ದಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಸಣ್ಣ ನೀರಾವರಿ, ಪ್ರವಾಸೋದ್ಯಮ ಇಲಾಖೆ ಒಳಗೊಂಡಣತೆ 15 ಇಲಾಖೆಗಳು ಪರಿಶಿಷ್ಟ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಶೇ.100 ರಷ್ಟು ಸಾಧನೆ ಮಾಡಿದೆ. ವಿವಿಧ ಕೃಷಿ ತೋಟಗಾರಿಕೆ, ಜವಳಿ ಇಲಾಖೆ, ಸೇರಿದಂತೆ 12 ಇಲಾಖೆಗಳು ಶೇ.50ಕ್ಕೂ ಹೆಚ್ಚು ಪ್ರಗತಿ ಸಾಧಿಸಿದೆ. ನಿಗಧಿತ ಪ್ರಗತಿ ಸಾಧಿಸದ ಇಲಾಖೆಗಳು ಜನವರಿ ಫೆಬ್ರವರಿ ಅಂತ್ಯಕ್ಕೆ ನಿಗಧಿತ ಗುರಿ ಹೊಂದಬೇಕು. ಎಂದು ಸೂಚಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಡಾ.ಎ ಚೆನ್ನಪ್ಪ, ಸಮಾಜ ಕಲ್ಯಾಣ ಇಲಾಖೆ ನಾಗರಾಜ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಆರ್ ತಿಪ್ಪೇಶಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಡಿಹೆಚ್‍ಓ ನಾಗರಾಜ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.