ಕುಸಿದ ಪೆಂಡಾಲ್ ರೈತರು ಬೀದಿಪಾಲು.! ಮಳೆಯನ್ನೂ ಲೆಕ್ಕಿಸದೆ ಹೋರಾಟ ಮುಂದುವರಿಸಿದ ಅನ್ನದಾತರು.!
ಬೆಂಗಳೂರು: ಕಬ್ಬಿಗೆ ನ್ಯಾಯಯುತ ದರ ನಿಗದಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಯುತ್ತಿದೆ. ಇಂದು 20ನೇ ದಿನವೂ ಸತ್ಯಾಗ್ರಹ ನಡೆಯಿತು. ಕಬ್ಬು ಬೆಳೆಗಾರರ ಸಂಘದ ರಾಜ್ಯಾದ್ಯಕ್ಷ ಕುರುಬರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಇಂದಿನ ಹೋರಾಟದಲ್ಲಿ ವಿವಿಧ ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು.
ಈ ನಡುವೆ, ಮಳೆಯ ಹೊಡೆತಕ್ಕೆ ಸಿಲುಕಿ ಸತ್ಯಾಗ್ರಹ ಸ್ಥಳದಲ್ಲಿನ ಪೆಂಡಾಲ್ ಕುಸಿದು ಬಿದದ್ದಿದೆ. ಆದರೂ ಛಲ ಬಿಡದೆ ಕಬ್ಬು ಬೆಳೆಗಾರರು ಮಳೆಯಲ್ಲೇ ಹೋರಾಟ ಮುಂದುವರಿಸಿದರು.
ಈ ವೇಳೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಸಂಯುಕ್ತ ಕಿಸಾನ್ ಮೋರ್ಚ ದಕ್ಷಿಣ ಭಾರತ ರಾಜ್ಯಗಳ ಮುಖ್ಯಸ್ಥ ಕುರುಬೂರ್ ಶಾಂತಕುಮಾರ್ ಮಾತನಾಡಿ, ಕಾರ್ಪೊರೇಟ್ ಕಂಪನಿಗಳಿಗೆ ಬಂಡವಾಳಶಾಹಿಗಳಿಗೆ 10 ಲಕ್ಷ ಕೋಟಿ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದರು,
ಸುಳ್ಳು ಭರವಸೆಗಳನ್ನು ನೀಡುತ್ತಲೇ ಕಾಲ ಕಳೆದು ರೈತರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡಬೇಡಿ, ಡಬಲ್ ಇಂಜಿನ ಸರ್ಕಾರ ಡಬಲ್ ಗೇಮ್ ಆಡಬಾರದು, ಪ್ರಕೃತಿ ಮುನಿಸು ಈ ವರ್ಷ ಅತಿವೃಷ್ಟಿ ಮಳೆ ಹಾನಿಯಿಂದ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ, ಗ್ರಾಹಕರು ಆಹಾರಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ , ಆಗಲಾದರೂ ರೈತರ ಶಕ್ತಿ ತಿಳಿಯುತ್ತದೆ ಎಂದರು.
ಕಬ್ಬು ಬೆಳೆಗಾರರ ಆಹೋ ರಾತ್ರಿ ಧರಣಿಯ 20ನೆ ದಿನದ ಹೋರಾಟದಲ್ಲಿ, ಉತ್ತರಕನ್ನಡ ಜಿಲ್ಲೆಯ ರೈತ ಮುಖಂಡರಾದ ಕುಮಾರ ಬೂಬಾಟಿ, ರಾಜ್ಯ ರೈತಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಪಿ ಸೂಮಶೇಖರ್, ಬರಡನಪುರ ನಾಗರಾಜ್, ಅತ್ತಹಳ್ಳಿ ದೇವರಾಜ್, ಕಿರಗಸೂರ ಶಂಕರ, ಗುರುಸಿದ್ದಪ್ಪಕೂಟಗಿ ಮೊದಲಾದವರು ಭಾಗಿಯಾಗಿದ್ದರು.