ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಗೆ ಒತ್ತಾಯಿಸಿ ಎಐಡಿಎಸ್ಓ ಪ್ರತಿಭಟನೆ
ದಾವಣಗೆರೆ: ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಪಾಲಿಸಿದ ನಿಯಮಗಳನ್ನೇ ಮೊದಲೆರಡು ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೂ ಪಾಲಿಸಿ, ಡಿಪ್ಲೋಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಷನ್ (ಎಐಡಿಎಸ್‌ಓ) ಸಂಘಟನೆಯಿಂದ ಶುಕ್ರವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎರಡನೇ ಮತ್ತು 4ನೇ ಸೆಮಿಸ್ಟರ್ ಪದವಿ, 2ನೇ ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಗಳನ್ನು ರದ್ದುಗೊಳಿಸಿರುವ ಸುತ್ತೋಲೆ ಎಲ್ಲಾ ವಿಶ್ವವಿದ್ಯಾಲಯಗಳು ಈ ಕೂಡಲೇ ಹೊರಡಿಸಬೇಕು, ರದ್ದುಗೊಳಿಸಿರುವ ಪರೀಕ್ಷೆಗಳ ಪರೀಕ್ಷಾ ಶುಲ್ಕ ಪಡೆಯಬಾರದು, ವಿದ್ಯಾರ್ಥಿಗಳು/ಪೋಷಕರ ಮೇಲೆ ಶುಲ್ಕದ ಒತ್ತಡ ಹೇರಬೇಡಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಂತಿಮ ವರ್ಷ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇನ್ನು ತಮ್ಮ ಹೋರಾಟಕ್ಕೆ ಜಯ ಸಿಗದೆ ಆತಂಕದಲ್ಲಿದ್ದಾರೆ. ಪದವಿ, ಸ್ನಾತಕೋತ್ತರ ತರಗತಿಗಳಲ್ಲಿ ಅಂತಿಮ ವರ್ಷ ಹೊರತುಪಡಿಸಿ ಮತ್ತಾರಿಗೂ ಬೆಸ ಸೆಮಿಸ್ಟರ್‌ನ ಪರೀಕ್ಷೆ ನಡೆಸಬಾರದೆಂದು ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದರೂ, ಇನ್ನು ಹಲವು ವಿಶ್ವವಿದ್ಯಾನಿಲಯಗಳು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬದಲಾಗಿ ಕೆಲವು ವಿವಿಗಳು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಪರೀಕ್ಷೆ ನಡೆಸಲು ಮುಂದಾಗುತ್ತಿವೆ. ಈಗಾಗಲೇ ಮಾನಸಿಕವಾಗಿ ತೀವ್ರ ಒತ್ತಡದಲ್ಲಿರುವ ವಿದ್ಯಾರ್ಥಿ ಸಮುದಾಯದ ಮೇಲೆ ಇದು ಮತ್ತಷ್ಟು ಒತ್ತಡವನ್ನು ಉಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚಿಗಷ್ಟೆ ಮಾನ್ಯ ಮುಖ್ಯಮಂತ್ರಿಗಳು ಮೂರನೇ ಅಲೆ ಆತಂಕ ಹಾಗೂ ಮತ್ತಿತರ ಮುಖ್ಯ ಕಾರಣಗಳನ್ನು ನೀಡಿ ಹತ್ತನೇ ತರಗತಿ ಮತ್ತು ಪಿಯು ತರಗತಿಗಳ ಪುನರಾರಂಭ ಸದ್ಯದಲ್ಲಿ ಮಾಡುವುದಿಲ್ಲ ಎಂದು ತಿಳಿಸಿದರು. ಆದರೆ, ಇದೇ ವಯೋಮಿತಿಗೆ ಸೇರಿರುವ ಮೊದಲೆರಡು ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳ ಬೌತಿಕ ತರಗತಿಗಳು ಆರಂಭವಾಗಿವೆ, ಅವರ ಪರೀಕ್ಷೆಗಳೂ ನಡೆಯುತ್ತಿವೆ. ಇದು ವಿದ್ಯಾರ್ಥಿಗಳ ನಡುವಣ ತಾರತಮ್ಯವನ್ನು ತೋರುತ್ತದೆ ಎಂದು ಆಕ್ಷೇಪಿಸಿದರು.
ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳು ಮೂರು ಪರೀಕ್ಷೆಗಳನ್ನು (5,6ನೇ ಸೆಮಿಸ್ಟರ್ ಹಾಗೂ ಡಿಸಿಇಟಿ) ಬರೆಯಬೇಕಿದ್ದು, ರಾಜ್ಯದಾದ್ಯಂತ ಅಂತಿಮ ವರ್ಷದ ವಿದ್ಯಾರ್ಥಿಗಳು ಒತ್ತಡ ಅನುಭವಿಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಮಾಣ ಕ್ರಮೇಣ ಏರುತ್ತಿದ್ದು, ಇದು ಸಹ ಅವರ ಮೇಲಿನ ಒತ್ತಡಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಹಾಗೂ ಇಲಾಖೆ ಮತ್ತೊಮ್ಮೆ ಈ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಸೂಕ್ತ ನಿಲುವು ತಾಳಬೇಕು ಎಂದು ಆಗ್ರಹಿಸಿದರು.