Finance: ಸ್ಥಳೀಯ ಸಂಸ್ಥೆ, ಪಂಚಾಯಿತಿಗಳ ಆರ್ಥಿಕ ಬಲವರ್ಧನೆ ಅಗತ್ಯ, ಅಭಿವೃದ್ದಿಗೆ ಸ್ವಂತ ಸಂಪನ್ಮೂಲ ಕೃಢೀಕರಣಕ್ಕೆ ಕ್ರಮವಹಿಸಲಿ – ಡಾ.ಸಿ.ನಾರಾಯಣಸ್ವಾಮಿ

ದಾವಣಗೆರೆ: (Finance) ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ಅಭಿವೃದ್ದಿಗೆ ಸ್ವಂತ ಸಂಪನ್ಮೂಲಗಳ ಕ್ರೂಢೀಕರಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು 5 ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ; ಸಿ.ನಾರಾಯಣಸ್ವಾಮಿಯವರು ಅಭಿಪ್ರಾಯಪಟ್ಟರು.
ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ 5 ನೇ ರಾಜ್ಯ ಹಣಕಾಸು ಸಂಸ್ಥೆಗಳ ಆಯೋಗದ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಯೋಗದಿಂದ ರಾಜ್ಯದ ಅನೇಕ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಸಮಾಲೋಚನಾ ಸಭೆಗಳು ಮತ್ತು ಅಧ್ಯಯನ ಕೈಗೊಳ್ಳಲಾಗಿದೆ. ಈ ಮೂಲಕ ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ದಿಯನ್ನು ಕೈಗೊಳ್ಳಲು ಕೈಗೊಳ್ಳಬೇಕಾದ ಸಂಶೋಧನಾ ವರದಿ ನೀಡುವಷ್ಟು ಮಾಹಿತಿಗಳನ್ನು ಇದರಿಂದ ಸಂಗ್ರಹ ಮಾಡಲು ಸಾಧ್ಯವಾಗಿದೆ. ಸ್ಥಳೀಯ ಸಂಸ್ಥೆಗಳು ಸ್ವಂತ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಷ್ಟು ಸಾಮಥ್ರ್ಯವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಆಯೋಗವು ವಿವರವಾದ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದು ಈಗಾಗಲೇ ಮೊದಲ ಕಂತಿನ ವರದಿಯ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಹಾವೇರಿ ಮತ್ತು ದಾವಣಗೆರೆ ಜಿಲ್ಲಾಧಿಕಾರಿ ಅವರಿಗೆ ವಿತರಣೆ ಮಾಡಿದರು.
ಆಯೋಗವು ರಾಜ್ಯ ಸರ್ಕಾರ ತೆರಿಗೆ, ಸುಂಕ ಹಾಗೂ ಶುಲ್ಕ ಸಂಗ್ರಹದ ಮೂಲಕ ಗಳಿಸುವ ಆದಾಯವನ್ನು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ನಡುವೆ ಸಮರ್ಪಕವಾಗಿ ಹಂಚಿಕೆ ಮಾಡುವ ಕುರಿತು ಶಿಫಾರಸ್ಸು ಮಾಡುತ್ತದೆ. ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ತೆರಿಗೆ ಹಾಗೂ ಸುಂಕ ವಿಧಿಸುವ ಹಕ್ಕಿದೆ. ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬಿಯಾದರೆ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದು ಅಧ್ಯಕ್ಷರಾದ ಡಾ.ಸಿ.ನಾರಾಯಣಸ್ವಾಮಿ ತಿಳಿಸಿದರು.
ನಿಖರ ವಿದ್ಯುತ್ ಬಿಲ್ ನೀಡಲು ಸೂಚನೆ; ಗ್ರಾಮ ಪಂಚಾಯಿತಿಗಳು ಸ್ಥಳೀಯ ಸಂಪನ್ಮೂಲಗಳ ಆಧಾರದ ಮೇಲೆ ಅಭಿವೃದ್ದಿ ಅವಲಂಭಿತವಾಗಿದೆ. ಆದರೆ ಅನಿರ್ಭಂದಿತ ಅನುದಾನದಲ್ಲಿ ಬಹುಪಾಲು ಸಿಬ್ಬಂದಿ ವೇತನಕ್ಕೆ ವೆಚ್ಚವಾಗುತ್ತಿರುವುದರಿಂದ ಅಭಿವೃದ್ದಿಗೆ ಅನುದಾನದ ಕೊರತೆಯಾಗುತ್ತಿದೆ. ವಿದ್ಯುತ್ ಬೀದಿ ದೀಪ ಸೇರಿದಂತೆ ಕುಡಿಯುವ ನೀರಿನ ಪೂರೈಕೆ ಬಳಕೆ ಮಾಡುವ ವಿದ್ಯುತ್ ವೆಚ್ಚದ ಬಿಲ್ ಬಾಬ್ತು ಸಾಕಷ್ಟು ಶುಲ್ಕ ಪಾವತಿಸಲಾಗುತ್ತಿದೆ. ಆದರೆ ಬಳಕೆಗಿಂತಲೂ ಹೆಚ್ಚಿನ ಬಿಲ್ ಪಾವತಿಸಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ. ವಿದ್ಯುತ್ ಕಂಪನಿಗಳು ಬಳಕೆ ಮಾಡಿದಷ್ಟು ಮಾತ್ರ ಬಿಲ್ ನೀಡಿ ಪಡೆಯಬೇಕು. ಕೆಇಆರ್‍ಸಿ ನಿಯಮಾವಳಿಯನ್ವಯ ನೋ ಮೀಟರ್, ನೋ ಬಿಲ್ ನಿಯಮವಿದೆ. ಆದರೆ ಸರಾಸರಿ ಬಿಲ್ಲಿನ ಮೊತ್ತ ಹಾಕಿ ಅಧಿಕ ಮೊತ್ತ ಪಡೆಯಲಾಗುತ್ತಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದ್ದು ಉಪಯುಕ್ತವಾದ ವಿದ್ಯುತ್‍ಗೆ ಬಿಲ್ ನೀಡಬೇಕೆಂದರು.
ಮಾರ್ಗಸೂಚಿ ಪರಿಷ್ಕರಣೆಗೆ ಶಿಫಾರಸ್ಸು: ಜನಸಂಖ್ಯೆ ಹಾಗೂ ಭೌಗೋಳಿಕ ಪ್ರದೇಶ ವ್ಯಾಪ್ತಿಯನ್ನು ಪ್ರಮುಖ ಮಾನದಂಡವಾಗಿ ಅನುಸರಿಸಿ 15ನೇ ಕೇಂದ್ರ ಹಣಕಾಸು ಆಯೋಗ, ಕೇಂದ್ರ ಸರ್ಕಾರದ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದೆ. ಇದರಿಂದಾಗಿ ದಕ್ಷಿಣ ರಾಜ್ಯಗಳಿಗೆ ಕಡಿಮೆ ಅನುದಾನ ಲಭಿಸಿದೆ. ಕೇಂದ್ರ ಸರ್ಕಾರವೇ ರೂಪಿಸಿದ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ಇದರಿಂದಾಗಿ ಜನಸಂಖ್ಯೆ ಬೆಳವಣಿಗೆ ದರ ಉತ್ತರದ ರಾಜ್ಯಗಳಿಗೆ ಹೊಲಿಸಿದರೆ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಇನ್ನು ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ಉತ್ತರದ ರಾಜ್ಯಗಳಿಗೆ ಹೊಲಿಸಿದರೆ ರಾಜ್ಯಕ್ಕೆ ಕಡಿಮೆ ಅನುದಾನ ಲಭಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆ ಹಾಗೂ ಸುಂಕಗಳು ಸಲ್ಲಿಕೆಯಾಗುತ್ತಿವೆ. ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸಿ, ರಾಜ್ಯ ತೆರಿಗೆ ಸಂಗ್ರಹದ ಅನುಗುಣವಾಗಿ ಅನುದಾನ ಹಂಚಿಕೆ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರ ಹಣಕಾಸು ಆಯೋಗಕ್ಕೆ ಮನವಿ ಮಾಡುವುದಾಗಿ ತಿಳಿಸಿದ ಅಧ್ಯಕ್ಷರು 15ನೇ ಕೇಂದ್ರ ಹಣಕಾಸು ಆಯೋಗ ಕೇಂದ್ರ ಸರ್ಕಾರದ ಅನುದಾನ ಹಂಚಿಕೆಗೆ ಅಳವಡಿಸಿಕೊಂಡಿದ್ದ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡುವಂತೆ, 16ನೇ ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರಿಗೆ ಶಿಫಾರಸ್ಸು ಮಾಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾ ಪಂಚಾಯತ್‍ನಿಂದ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ 2016 ರಿಂದ 2025 ರವರೆಗೆ ಹಂಚಿಕೆಯಾದ ಅನುದಾನ, ಬಿಡುಗಡೆಯಾದ ಅನುದಾನ ಮತ್ತು ಖರ್ಚಾದ ಅನುದಾನದ ವಿವರಗಳನ್ನು ಆಯೋಗದ ಅಧ್ಯಕ್ಷರು ಪಡೆದುಕೊಂಡರು. ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯಾದ ಅನುದಾನ ಮತ್ತು ಬಿಡುಗಡೆ ಹಾಗೂ ವೆಚ್ಚವಾದ ಅಂಕಿಅಂಶಗಳನ್ನು ಪಡೆದುಕೊಂಡ ಅಧ್ಯಕ್ಷರು ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆ ಇದ್ದರೂ ಸಹ ಅಭಿವೃದ್ದಿ ಕೈಗೊಳ್ಳಲಾಗಿದೆ ಎಂದು ಸಮಾಧಾನ ವ್ಯಕ್ತಪಡಿಸಿ ಸಿಬ್ಬಂದಿಗಳ ಕೊರತೆ ಅಭಿವೃದ್ದಿಗೆ ಹಿನ್ನಡೆಯಾಗಿಲ್ಲ ಎಂದರು.
ಸಮಾಲೋಚನಾ ಸಭೆಯಲ್ಲಿ ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಭಾಗವಹಿಸಿದ್ದು ಅವರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ. ಸಿಇಓ ಸುರೇಶ್ ಬಿ ಇಟ್ನಾಳ್, ಹಾವೇರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ, ಜಿ.ಪಂ. ಸಿಇಓ ರುಚಿ ಬಿಂದಲ್, ಆಯೋಗದ ಸದಸ್ಯ ಮೊಹಮ್ಮದ್ ಸನಾವುಲ್ಲಾ, ಆರ್.ಎಸ್.ಪೋಂಡೆ, ಸಮಾಲೋಕರಾದ ಎಂ.ಕೆ.ಕೆಂಪೇಗೌಡ, ಸಿ.ಜಿ.ಸುಪ್ರಸನ್ನ, ಅಧ್ಯಕ್ಷರ ಆಪ್ತಕಾರ್ಯದರ್ಶಿ ಕೆ.ಯಾಲಕ್ಕಿಗೌಡ ಹಾಗೂ ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಚುನಾಯಿತ ಸದಸ್ಯರು ಉಪಸ್ಥಿತರಿದ್ದರು.