ಜಿಎಂ ಫಾರ್ಮಸಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಐದು ದಿನದ ಕಾರ್ಯಾಗಾರ

ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ಫಾರ್ಮಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಐದು ದಿನದ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿತ್ತು. ಈ ತರಬೇತಿ ಕಾರ್ಯಕ್ರಮವನ್ನು ಪುಣೆ ಮೂಲಕ ಹೆಸರಾಂತ ತರಬೇತಿ ಸಂಸ್ಥೆಯಾದ ರುಬಿಕಾನ್ ಸ್ಕಿಲ್ ಡೆವಲಪ್ಮೆಂಟ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ನುರಿತ ತರಬೇತಿ ತಜ್ಞರುಗಳಾದ ಡ್ಯಾನಿಯಲ್ ಸ್ಯಾಮ್ಸನ್ ಮತ್ತು ಲೀನಾ ರಾವ್ ಐದು ದಿನಗಳ ಈ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಜಿ ಎಂ ಐ ಪಿ ಎಸ್ ಆರ್ ಕಾಲೇಜಿನ ಪ್ರಾಂಶುಪಾಲರಾದ ಡಾ ಗಿರೀಶ್ ಬೋಳಕಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮುಖಾಂತರ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮ ಬೇಕೆಂದು ಇದೇ ವೇಳೆ ತಿಳಿಸಿದರು.
ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿಆರ್ ಮಾತನಾಡಿ ಇಂದಿನ ಕೈಗಾರಿಕಾ ವಲಯದಲ್ಲಿ ವಿದ್ಯಾರ್ಥಿ ಕೌಶಲ್ಯ ಜ್ಞಾನ ಮತ್ತು ತಾಂತ್ರಿಕ ಚಟುವಟಿಕೆಗಳಿಗೆ ಹೆಚ್ಚು ಹೊತ್ತು ನೀಡುತ್ತಿದ್ದು, ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಕೈಗಾರಿಕಾ ತರಬೇತಿಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ತಯಾರು ಮಾಡುವ ಜವಾಬ್ದಾರಿ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ಗಿರೀಶ್ ಬೋಳಕಟ್ಟಿ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿಆರ್ , ತರಬೇತಿದಾರರುಗಳು , ಪ್ಲೇಸ್ಮೆಂಟ್ ಸಂಯೋಜಕರಾದ ಪ್ರೊ ರಾಕೇಶ್ ಮತ್ತು ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.