ಫ್ಲೆಕ್ಸ್ ನಿಷೇಧ: ಬಿಬಿಎಂಪಿ ಆದೇಶಕ್ಕೆ ಸಮರ್ಥನೆ.! ಕಾನೂನು ಹೋರಾಟ ಬಿಗಿಗೊಳಿಸಲು ಸರ್ಕಾರದ ತೀವ್ರ ಕಸರತ್ತು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ನಿಷೇಧವಿದ್ದರೂ ನಿಯಮಗಳನ್ನು ಉಲ್ಲಂಘಿಸಿ ಅವುಗಳನ್ನು ಅಳವಡಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಕೇಳಿಬರುತ್ತಿರುವ ದೂರುಗಳು ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನಿಷೇಧದ ಕ್ರಮವನ್ನು ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ಫ್ಲೆಕ್ಸ್, ಬ್ಯಾನರ್ ಬಳಕೆಗೆ ನಿರ್ಬಂಧ ಇದೆ. ಫ್ಲೆಕ್ಸ್ ಸಾಮಾಗ್ರಿಯು ಪರಿಸರಕ್ಕೆ ಹಾನಿಕರವಾಗಿದೆ ಎಂಬುದು ಮೂಲ ಕಾರಣವಾಗಿದೆ. ಜಾಹೀರಾತುಗಳು ಅಪಘಾತಕ್ಕೂ ಕಾರಣವಾಗುತ್ತಿದೆ, ಫ್ಲೆಕ್ಸ್ ಬ್ಯಾನರ್‌ಗಳಿಂದಾಗಿ ನಗರ ಸೌಂದರ್ಯಕ್ಕೆ ಧಕ್ಜೆಯಾಗುತ್ತದೆ ಎಂಬುದೂ ಈ ನಿರ್ಬಂಧಕ್ಕೆ ಕಾರಣವಾಗಿದೆ. ಆದರೆ ಈ ನಿರ್ಬಂಧಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಈ ಸಂಬಂಧದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.
ಈ ನಡುವೆ, ಫ್ಲೆಕ್ಸ್ ಬ್ಯಾನರ್‌ನಿಂದ ಪರಿಸರಕ್ಕೆ ಹಾನಿಯಾಗುವುದಾದರೆ ಅದು ಬೆಂಗಳೂರಿಗಷ್ಟೇ ಏಕೆ ಸೀಮಿತವಾಗಬೇಕು ಎಂದು ಪ್ರಶ್ನಿಸಿರುವ ಕೆಲವು ಎನ್‌ಜಿಒಗಳು, ಈ ನಿಷೇಧದ ಕ್ರಮವನ್ನು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಬೇಕೆಂದು ಮನವಿ ಸಲ್ಲಿಸಿವೆ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಬಗ್ಗೆ ಪರಿಶೀಲನೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಫ್ಲೆಕ್ಸ್ ವಿಚಾರದಲ್ಲಿನ ನಿಷೇಧದ ಕ್ರಮಕ್ಕೆ ನ್ಯಾಯಾಲಯದಲ್ಲಿ ಯಾವುದೇ ಕಾರಣಕ್ಕೂ ಸೋಲಾಗಬಾರದೆಂಬ ನಿಟ್ಟಿನಲ್ಲಿ ಸಮರ್ಥ ಕಾನೂನು ಹೋರಾಟಕ್ಕೆ ಸರ್ಕಾರದಿಂದ ಸಿದ್ದತೆ ನಡೆದಿದೆ. ಒಂದೊಮ್ಮೆ ಬಿಬಿಎಂಪಿ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳು ಕೆಲವೇ ತಿಂಗಳಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಬಿಬಿಎಂಪಿಯ ಫ್ಲೆಕ್ಸ್ ಕುರತ ಆದೇಶ ರದ್ದುಗೊಳಿಸಬೇಕೆಂಬ ತೀರ್ಪು ಬಂದರೆ ರಾಜ್ಯ ಸರ್ಕಾರದ ವರ್ಚಸ್ಸಿಗೆ ಹಾನಿಯಾಗಬಹುದು. ಹಾಗಾಗಿ ಸಮರ್ಥವಾಗಿ ಕಾನೂನು ಹೋರಾಟಕ್ಕೆ ಸರ್ಕಾರ ತಯಾರಿ ನಡೆಸಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಅವರೂ ಸುಳಿವು ನೀಡಿದ್ದು, ಬಿಬಿಎಂಪಿ ಆದೇಶವು ಬೆಂಗಳೂರಿಗೆ ಅನಿವಾರ್ಯವಾಗಿದೆ ಎಂದಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.