MRPಗಿಂತ ಹೆಚ್ಚು ಹಣ ಪಡೆದ ಫ್ಲಿಪ್‌ಕಾರ್ಟ್; ಬೆಂಗಳೂರು ಮಹಿಳೆಗೆ ಸಿಕ್ಕಿತು 20,000 ರೂ. ಪರಿಹಾರ!
ಬೆಂಗಳೂರು: ಎಂಆರ್‌ಪಿ ರೇಟ್‌ಗಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆದಿದ್ದ ಫ್ಲಿಪ್‌ಕಾರ್ಟ್‌ಗೆ ಗ್ರಾಹಕರ ನ್ಯಾಯಾಲಯವು 20,000 ರೂ ದಂಡವನ್ನು ವಸೂಲಿ ಮಾಡಿದೆ.
ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿ ಸೌಮ್ಯಾ.ಪಿ 2019ರ ಅಕ್ಟೋಬರ್‌ನಲ್ಲಿ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಶಾಂಪುವೊಂದನ್ನು ಆರ್ಡರ್ ಮಾಡಿ, ಫೋನ್ ಪೇ ಮೂಲಕ 191ರೂ. ಹಣವನ್ನು ಪಾವತಿಸಿದ್ದರು. ಮನೆಗೆ ಬಂದ ಪಾರ್ಸೆಲ್ ತೆರೆದು ನೋಡಿದಾಗ ಶಾಕ್ ಕಾದಿತ್ತು. ಯಾಕೆಂದರೆ ಶಾಂಪು ಬಾಟೆಲ್ ಮೇಲೆ ಎಂಆರ್‌ಪಿ ದರ 95 ಇತ್ತು. ಫ್ಲಿಪ್‌ಕಾರ್ಟ್ ಮೂಲಕ ಗುಜರಾತ್‌ನ ಸೂರತ್‌ನ ಎಚ್ಚಿಕೆ ಎಂಟರ್ಪ್ರೈಸಸ್ ಸಂಸ್ಥೆ ಮಾರಿತ್ತು.
ಕೂಡಲೇ ಸೌಮ್ಯ ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್‌ಗೆ ದೂರು ನೀಡಿದರು.ಆಗ ಆರ್ಡರ್ ಮರಳಿಸಿ ರೀಫಂಡ್ ಮಾಡುವುದಾಗಿ ಹೇಳಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮವಹಿಸಲಾಗುತ್ತೆ ಎಂಬ ಭರವಸೆ ನೀಡಿತ್ತು. ಆದರೆ ಮಾರಾಟ ಮಾಡಿದ ಸಂಸ್ಥೆಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದನ್ನು ಸೌಮ್ಯ ಗಮನಿಸಿದ್ದರು.
ಬಳಿಕ ಸೌಮ್ಯ ಶಾಂತಿನಗರದ ನಾಲ್ಕನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ಫ್ಲಿಟ್‌ಕಾರ್ಟ್ ಹಾಗೂ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಿದ್ದ ಗುಜರಾತ್‌ನ ಸೂರತ್‌ನ ಎಚ್ಚಿಕೆ ಎಂಟರ್ಪ್ರೈಸಸ್ ಸಂಸ್ಥೆ ವಿರುದ್ಧ ದೂರು ನೀಡಿದರು. ದೂರು ಪರಿಶೀಲಿಸಿದ ಕೋರ್ಟ್ ಈ ಸಂಬಂಧ ಗ್ರಾಹಕರ ಪರವಾಗಿ ತೀರ್ಪು ನೀಡಿದೆ. ಮಾತ್ರವಲ್ಲ ಹೆಚ್ಚುವರಿ ಶುಲ್ಕ ಪಡೆದ ಕಾರಣಕ್ಕೆ 20,000 ದಂಡವನ್ನು ವಿಧಿಸಿದೆ.