Folk culture: ಜನಪದ ಸಂಸ್ಕೃತಿಗೆ ನಮನ: ದಾವಣಗೆರೆಯಲ್ಲಿ “ಜನಪದ ಉತ್ಸವ-25”

ದಾವಣಗೆರೆ: (Folk Culture) ನಗರದಲ್ಲಿ ಮುಂಗಾರು ಬಾರದ ಕಳೆವೇಳೆಯ ಮಧ್ಯೆ ಜನಪದದ ಘಮಘಮದೊಡನೆ ಏಪ್ರಿಲ್ 9 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆಯಲ್ಲಿ ಕನ್ನಡದ ಜಗತ್ತಿಗೆ ಮತ್ತೊಮ್ಮೆ ಸಂಸ್ಕೃತಿಯ ಸುವಾಸನೆ ಹರಡಲು ಸಜ್ಜಾಗಿದೆ. “ಜನಪದ ಉತ್ಸವ-25” ಎಂಬ ವೈಶಿಷ್ಟ್ಯಪೂರ್ಣ ಆಚರಣೆಯಲ್ಲಿ ಈ ಬಾರಿ “ನಮ್ಮ ಸಂಸ್ಕೃತಿ – ನಮ್ಮ ಹೆಮ್ಮೆ” ಎಂಬ ಆಸಕ್ತಿದಾಯಕ ಸಾಂಸ್ಕೃತಿಕ ಘೋಷ ವಾಕ್ಯ ವೈಭವಕ್ಕೆ ಸಾಕ್ಷಿಯಾಗಲಿದೆ.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ, ಐಕ್ಯೂ ಎಸಿ ಮತ್ತು ಸಾಂಸ್ಕೃತಿಕ ವಿಭಾಗದ ಸಹಯೋಗದಲ್ಲಿ ಈ ಉತ್ಸವವನ್ನು ದಿನಾಂಕ 9- 4- 2025 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಬಸವರಾಜ್ ಸಿ ತಹಸೀಲ್ದಾರ ವಹಿಸಲಿದ್ದಾರೆ. ಜನಪದ ಪರಂಪರೆಯ ಪ್ರತಿನಿಧಿಯಾಗಿ ಉದ್ಘಾಟನಾ ಭಾಷಣವನ್ನು ಹರಿಹರದ ಜನಪದ ಮತ್ತು ತತ್ವ ಪದ ಗಾಯಕರಾದ ಶ್ರೀ ಪರಮೇಶ್ವರಪ್ಪ ಕತ್ತಿಗೆಯವರು ಮಾಡಲಿದ್ದಾರೆ
ಕನ್ನಡದ ಹಿರಿಯ ಪ್ರಾಧ್ಯಾಪಕರಾದ ಪ್ರೊಫೆಸರ್ ಎಸ್ ಆರ್ ಅಂಜನಪ್ಪರವರ ವಿಶೇಷ ಉಪನ್ಯಾಸದ ಮೂಲಕ ಜನಪದದ ನಾಡು-ನುಡಿ, ಪರಂಪರೆ ಮತ್ತು ಭವಿಷ್ಯದ ಪರಿಧಿಗಳ ಕುರಿತು ಅರಿವು ಮೂಡಿಸಲಾಗುತ್ತದೆ.
ಅತಿಥಿಗಳಾಗಿ ದಾವಣಗೆರೆಯ ಸರ್ಕಾರಿ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜಪ್ಪ ಕೆ ವಿ ಹಾಗೂ ಓದುಗರ ಮನಸ್ಸಿನಲ್ಲಿ ಸಾಹಿತ್ಯದ ಹೊಳೆ ಹರಿಸಲು ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕರಾದ ಶ್ರೀ ರವಿಚಂದ್ರನ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಐಕ್ಯೂ ಏ ಎಸ್ ಸಂಚಾಲರಕರಾದ ಶ್ರೀ ಗುರುರಾಜ್ ಕಾಲೇಜಿನ ಅಧೀಕ್ಷಕರಾದ ಶ್ರೀಮತಿ ಪ್ರತಿಭಾ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಪ್ರೊ ನರೇಶ್ ರವರು ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಸಂಸ್ಕೃತಿಗಳಾದ ಬಂಜಾರ ನೃತ್ಯ, ತುಳು ನೃತ್ಯ ಯಕ್ಷಗಾನ ಹಾಗೂ ಇತರೆ ಗ್ರಾಮೀಣ ಹಾಡುಗಳು ನೃತ್ಯಗಳು ಆಟೊಟಗಳು ಹಾಗೂ ಕೃಷಿ ಉಪಕರಣಗಳ ಪ್ರದರ್ಶನ ಇರುತ್ತದೆ. ಅಳಿಸಿ ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡನ್ನು ಮತ್ತೆ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕಾರ್ಯಕ್ರಮವೇ ಈ ಜಾನಪದ ಉತ್ಸವ.
ಜನಪದ ಉತ್ಸವ ಕೇವಲ ಒಂದು ಕಾರ್ಯಕ್ರಮವಲ್ಲ; ಅದು ನಮ್ಮ ಮೂಲ ಮಣ್ಣಿನ ಘಮಘಮ, ನುಡಿಮುತ್ತುಗಳ ಛಾಯಾಪಟ, ಮರೆತ ನಾಡಧ್ವನಿಯ ಪ್ರತಿಧ್ವನಿಯಾಗಿದೆ. ಇಂತಹ ಸಂಸ್ಕೃತಿಕ ಉತ್ಸವಗಳ ಮೂಲಕ ವಿದ್ಯಾರ್ಥಿಗಳಲ್ಲಿ ನಾಡಿನ ಉಸಿರಾಟ ಮತ್ತೆ ಜೀವಂತಗೊಳ್ಳುತ್ತದೆ.. ಎಂದು ಪ್ರಕಟಣೆಯಲ್ಲಿ ಪ್ರೊ ವೆಂಕಟೇಶ್ ಬಾಬುರವರು ತಿಳಿಸಿದ್ದಾರೆ