ದೇಶದ ಸುಭೀಕ್ಷೆಗೆ ರೈತರು, ಕಾರ್ಮಿಕರು ಕಾರಣ: ಶಾಂತಗಂಗಾಧರ್
ದಾವಣಗೆರೆ: ಕಾರ್ಮಿಕರು ಮತ್ತು ರೈತರೇ ನಮ್ಮ ದೇಶದ ಸುಭೀಕ್ಷೆಗೆ ಕಾರಣೀಕರ್ತರು. ಅವರ ಶ್ರಮದಿಂದಲೇ ದೇಶದಲ್ಲಿ ಉತ್ಪಾದನೆಯಾಗುತ್ತದೆ. ಆದರೆ, ಅವರ ಬದುಕು ಮಾತ್ರ ಹಸನಾಗಿಲ್ಲ. ಅವರ ನ್ಯಾಯಯುತವಾದ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಸಾಹಿತಿ ಎಸ್.ಟಿ.ಶಾಂತಗಂಗಾಧರ್ ಹೇಳಿದರು.
ಮಾಗನೂರು ಬಸಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆದ ಎಐಟಿಯುಸಿ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಂದು ಸಂಘಟಿತ ವಲಯದ ಕಾರ್ಮಿಕರೇ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ.
ಇನ್ನು ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿಯಂತೂ ಇನ್ನಷ್ಟು ಕೆಟ್ಟದಾಗಿದೆ. ಆದ್ದರಿಂದ ಸರಕಾರ ಕಾರ್ಮಿಕರ ಪರವಾದ ಧೋರಣೆಯನ್ನು ಹೊಂದಬೇಕಾಗಿರುವುದು ಅತ್ಯಗತ್ಯವಾಗಿದೆ ಎಂದು ಸರಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಎಐಟಿಯುಸಿ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಕೆ.ರಾಘವೇಂದ್ರ ನಾಯರಿ ಹಾಗೂ ಅವರಗೆರೆ ಹೆಚ್.ಜಿ.ಉಮೇಶ್ ಅವರನ್ನು ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅವರಗೆರೆ ಉಮೇಶ, ಸಮ ಸಮಾಜದ ನಿರ್ಮಾಣವೇ ಎಐಟಿಯುಸಿ ಗುರಿಯಾಗಿದೆ. ಶತಮಾನದ ಹಿನ್ನಲೆಯನ್ನು ಹೊಂದಿರುವ ಎಐಟಿಯುಸಿ ಕಾರ್ಮಿಕರು ಮತ್ತು ರೈತರ ಹಿತ ಕಾಯಲು ಬದ್ಧವಾಗಿದೆ ಎಂದು ಹೇಳಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಸರಕಾರಗಳು ಮಾಲೀಕ ವರ್ಗವನ್ನು ಮತ್ತು ಬಂಡವಾಳಷಾಹಿಗಳನ್ನು ಓಲೈಸುವುದಕ್ಕಾಗಿ ಅವರ ಪರವಾದ ಧೋರಣೆಯನ್ನು ತಾಳುವುದರಿಂದ ದುಡಿಯುವ ವರ್ಗಕ್ಕೆ ಹಿನ್ನಡೆಯಾಗುತ್ತಿದೆ.
ಅವರ ಬೇಡಿಕೆಗಳಿಗೆ, ಹೋರಾಟಕ್ಕೆ ಸರಕಾರ ಸ್ಪಂದಿಸದೇ ಇರುವುದರಿಂದ ದುಡಿಯುವ ವರ್ಗ ಸದಾ ಕಾಲ ವಿರೋಧ ಪಕ್ಷದ ನೆಲೆಯಲ್ಲಿಯೇ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ವಿಷಾದಿಸಿದರು.
ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ವಿ.ನಂಜುಂಡೇಶ್ವರ ಅವರು ವಹಿಸಿದ್ದರು. ಸ್ಟೇಟ್ ಬ್ಯಾಂಕ್ ನಿವೃತ್ತರ ಸಂಘದ ಅಜಿತ್ ಕುಮಾರ್ ನ್ಯಾಮತಿ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಆರ್.ಆಂಜನೇಯ ಹಾಗೂ ಹೆಚ್.ಎಸ್.ತಿಪ್ಪೇಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ರಂಗಸ್ವಾಮಿ, ಕಾರ್ಯದರ್ಶಿ ಹೆಚ್.ಸುಗುರಪ್ಪ, ಖಜಾಂಚಿ ಜಿ.ಬಿ. ಶಿವಕುಮಾರ್ ಹಾಗೂ ಪದಾದಿಕಾರಿಗಳಾದ ಕರಿಬಸಪ್ಪ ಹುಲ್ಲತ್ತಿ, ಜೆ.ಓ.ಮಹೇಶ್ವರಪ್ಪ, ನರೇಂದ್ರ ಕುಮಾರ್, ಎಮ್.ಹೆಚ್.ಮಂಜುನಾಥ್ ರಾವ್, ಎಸ್.ಸುರೇಶ್, ರುದ್ರಪ್ಪ, ವೇದಮೂರ್ತಿ, ಆರ್.ಜಿ.ಕುಲಕರ್ಣಿ, ಸಾಹಿತಿ ಸತ್ಯಭಾಮ ಮಂಜುನಾಥ್, ನಾಗವೇಣಿ ನರೇಂದ್ರ ಕುಮಾರ್, ಸೂರ್ಯ ನಾರಾಯಣ ಅಡಿಗ ಮುಂತಾದವರು ಉಪಸ್ಥಿತರಿದ್ದರು.