ಹಾಸನ: ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲು
ಹಾಸನ: ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾಗಿರುವಂತಹ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ನಡೆದಿದೆ.
ಬೇಸಿಗೆ ರಜೆ ನಿಮಿತ ಮಕ್ಕಳು ಈಜಾಡುವ ಸಲುವಾಗಿ ಕೆರೆಗೆ ಹೋಗಿದ್ದಾರೆ ಎನ್ನಲಾಗಿದೆ. ಮೃತ ಮಕ್ಕಳನ್ನು ಜೀವನ್(13), ಸಾತ್ವಿಕ್(11), ವಿಶ್ವ(12), ಪೃಥ್ವಿ(12)ಎಂದು ಗುರುತಿಸಲಾಗಿದೆ. ಮತ್ತೋರ್ವ ಬಾಲಕ ಚಿರಾಗ್ (10) ಬದುಕುಳಿದಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಗೆ ರಜೆ ಇರುವುದರಿಂದ ಮೀನು ಹಿಡಿಯಲು ಹೋಗಿದ್ದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸುವ ಯತ್ನದಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಶವಗಳಿಗಾಗಿ ಹುಡುಕಾಟ ಆರಂಭಿಸಿದ್ದು, ಸದ್ಯ ಇಬ್ಬರು ಬಾಲಕರ ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಸಂಬಂಧ ಅಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.