ವರುಣನ ಆರ್ಭಟಕ್ಕೆ ನಾಲ್ವರು ಸಾವು
ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಆರ್ಭಟಕ್ಕೆ ನಾಲ್ವರು ಬಲಿಯಾಗಿದ್ದಾರೆ. ಶುಕ್ರವಾರ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಹದಿಮೂರು ಜಾನುವಾರುಗಳು ಸಾವನ್ನಪ್ಪಿವೆ.
ಗದಗ ತಾಲ್ಲೂಕಿನ ಲಿಂಗದಾಳ ಗ್ರಾಮದಲ್ಲಿ ಕುರಿ ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಶರಣಪ್ಪ ಪುರದ (19) ಹಾಗೂ ದೇವರಾಜ ಹನುಮಂತಪ್ಪ (19) ಮೃತಪಟ್ಟಿದ್ದಾರೆ. ಮತ್ತೊಬ್ಬ ಕುರಿಗಾಹಿ ಸುನೀಲ್ ಎಂಬಾತ ಗಾಯಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜಾಲಿಹಾಳ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಮಳೆಯಿಂದ ಮನೆ ಚಾವಣಿ ಕುಸಿದು ಯಂಕುಬಾಯಿ ಕುಲಕರ್ಣಿ (79), ಶಾರವ್ವ ಪತ್ತಾರ (58) ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ಕೊಪ್ಪಳದಲ್ಲಿ ಎರಡು ಜಾನುವಾರುಗಳು, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ 5 ಜಾನುವಾರುಗಳು ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿ 6 ಜಾನುವಾರುಗಳು, ಅಫಜಲಪುರ ತಾಲ್ಲೂಕಿನ ತೆಲ್ಲೋಣಗಿ ಗ್ರಾಮದಲ್ಲಿ ಬಸವರಾಜ ಮಾಗಣಗೇರಿ ಅವರಿಗೆ ಸೇರಿರುವ ಎರಡು ಎತ್ತುಗಳು ಸಾವನ್ನಪ್ಪಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ. ಉಜಿರೆ, ಧರ್ಮಸ್ಥಳ, ಮುಂಡಾಜೆ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದ್ದು, ನಾರಾವಿ, ವೇಣೂರು, ಅಳದಂಗಡಿ ಭಾಗದಲ್ಲೂ ಉತ್ತಮ ಮಳೆಯಾಗಿದೆ.