ಐದು ರೂಪಾಯಿಗೆ ಕೆಜಿಯಂತೆ ಈರುಳ್ಳಿ ಕೊಡುವುದಾಗಿ ಹೇಳಿ ವಂಚನೆ
ದಾವಣಗೆರೆ: 5 ರೂಪಾಯಿಗೆ ಕೆ.ಜಿ.ಯಂತೆ ಈರುಳ್ಳಿ ಸಿಗುತ್ತದೆ ಎಂಬುದನ್ನು ನಂಬಿದ ವ್ಯಾಪಾರಿಯೊಬ್ಬ 4 ಲಕ್ಷ ರೂ. ಕಳೆದುಕೊಂಡ ಬಗ್ಗೆ ವರದಿಯಾಗಿದೆ.
ತಮಿಳುನಾಡಿನ ದಿಂಡುಗಲ್ ಜಿಲ್ಲೆಯ ಪಳನಿ ತಾಲ್ಲೂಕಿನ ಬಾಲಸಮುದ್ರಂ ಗ್ರಾಮದ ನಿವಾಸಿ ತಂಗವೇಲು ಮೋಸ ಹೋದವರು.
ತಾಲ್ಲೂಕಿನ ಕುಕ್ಕುವಾಡದ ಬಳಿ ಈರುಳ್ಳಿ ಕೊಡುವುದಾಗಿ ನಂಬಿಸಿ ತಮಿಳುನಾಡಿನ ವ್ಯಾಪಾರಿಯೊಬ್ಬರಿಗೆ ನಾಲ್ವರು ವಂಚಿಸಿದ್ದಾರೆ.
ರಮೇಶ ಎಂಬಾತ ತಂಗವೇಲು ಅವರಿಗೆ ಮೊಬೈಲ್ ಕರೆ ಮಾಡಿ ನಾನು ಈರುಳ್ಳಿ ವ್ಯಾಪಾರಿ 5 ರೂ.ಗೆ ಒಂದು ಕೆ.ಜಿ. ಈರುಳ್ಳಿ ಕೊಡುವುದಾಗಿ ಹೇಳಿದ್ದಾನೆ. ಅಲ್ಲದೇ ವಿಡಿಯೊ ಕಾಲ್ ಮಾಡಿ ತೋಟದಲ್ಲಿ ಬೆಳೆದ ಈರುಳ್ಳಿಯನ್ನೂ ತೋರಿಸಿದ್ದಾನೆ. ಇದನ್ನು ನಂಬಿದ ತಂಗವೇಲು ಮಾರ್ಚ್ 2ರಂದು ತಮಿಳುನಾಡಿನಿಂದ ಕುಕ್ಕವಾಡಕ್ಕೆ ಬಂದಾಗ ರಮೇಶ ಬೈಕ್ನಲ್ಲಿ ಕುಕ್ಕವಾಡಕ್ಕೆ ಕರೆದುಕೊಂಡು ಹೋಗಿ ಇತರೆ ಮೂವರನ್ನು ಪರಿಚಯಿಸಿ ಇವರೂ ಈರುಳ್ಳಿ ವ್ಯಾಪಾರಿಗಳು ಹಣ ಕೊಟ್ಟರೆ ಈರುಳ್ಳಿ ತುಂಬಿಸಿ ಕಳುಹಿಸಿಕೊಡುವುದಾಗಿ ನಂಬಿಸಿದ್ದಾರೆ.
ಇದನ್ನು ನಂಬಿದ ತಂಗವೇಲು ಅವರಿಗೆ 4 ಲಕ್ಷ ರೂ. ನೀಡಿದ್ದಾರೆ. ಹಣ ಕೊಟ್ಟು 8 ದಿನವಾದರೂ ಈರುಳ್ಳಿ ಕಳುಹಿಸದೇ ಇದ್ದುದರಿಂದ ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಹದಡಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.