ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಬಡವರ ಪಾಲಿಗೆ ಸೌಭಾಗ್ಯ: ಮಹಿಳೆಯರು ನಿಸ್ಸಂಕೋಚವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರಭಾ ಮಲ್ಲಿಕಾರ್ಜುನ್ ಕರೆ

ದಾವಣಗೆರೆ: ಎಸ್.ಎಸ್.ಕೇರ್ ಟ್ರಸ್ಟ್ ಹಾಗೂ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಕಾಲೇಜು ಆಫ್ ಡೆಂಟಲ್ ಸೈನ್ಸ್ ವತಿಯಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರವನ್ನು ದಾವಣಗೆರೆ ಮಹಾನಗರ 15ನೇ ವಾರ್ಡ್‍ನ ಯಲ್ಲಮ್ಮನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಶಿಬಿರವನ್ನು ಉದ್ಘಾಟಿಸಿ ದಾವಣಗೆರೆ ನಗರದ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಎಸ್.ಎಸ್.ಕೇರ್ ಟ್ರಸ್ಟ್ ನಿಂದ ಮಹಿಳೆಯರಿಗೆ ಆರೋಗ್ಯ ತಪಾಸಣೆ ನಡೆಸಲು ಉದ್ದೇಶಿಸಿದ್ದು, ಪ್ರತಿ ವಾರ್ಡ್ ಮಟ್ಟದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.
ಈ ಶಿಬಿರದಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ರಕ್ತ ತಪಾಸಣೆ, ಕಣ್ಣಿನ ತಪಾಸಣೆ, ಸ್ತನ ಆರೋಗ್ಯ ತಪಾಸಣೆ, ದಂತ ತಪಾಸಣೆ, ಚರ್ಮ ಕಾಯಿಲೆಗಳು, ಗರ್ಭಕೋಶ ಹಾಗೂ ಡಯಾಬಿಟಿಕ್ ನ್ಯೂರೋಪತಿ, ಇಸಿಜಿ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಿ ಅವಶ್ಯಕವಾಗಿರುವವರಿಗೆ ಹೆಚ್ಚಿನ ಚಿಕಿತ್ಸೆಯನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯ ಕೊಠಡಿ ಸಂಖ್ಯೆ 3ರಲ್ಲಿ ನಡೆಸಲಾಗುವುದು ಎಂದರು.
ಈಗಾಗಲೇ 5 ವಾರ್ಡ್ ಗಳಲ್ಲಿ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಪ್ರತಿ ಶಿಬಿರಗಳಲ್ಲಿ ಮಹಿಳೆಯರು ಹೆಚ್ಚಿನ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಬಡವರಿಗೆ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದ ಅವರು 35 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯರು ಈ ಶಿಬಿರದಲ್ಲಿ ಹೆಸರು ನೋಂದಾಯಿಸಿ ತಪ್ಪದೇ ತಪಾಸಣೆಗೆ ಒಳಗಾಗುವಂತೆ ಕರೆ ನೀಡಿದರು.
ಇದಲ್ಲದೇ ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಶಾಮನೂರು ಶಿವಶಂಕರಪ್ಪನವರು ಇತ್ತೀಚೆಗೆ ಪ್ರಕಟಿಸಿದಂತೆ ಕಿಡ್ನಿ ತೊಂದರೆ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸಹ ನೀಡಿಸಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ|| ಶಾಮನೂರು ಶಿವಶಂಕರಪ್ಪನವರು, ಜಂಟಿ ಕಾರ್ಯದರ್ಶಿ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಈಗಾಗಲೇ 5-6 ಶಿಬಿರಗಳನ್ನು ನಡೆಸಿ ಬಡವರ ಪಾಲಿಗೆ ಸೌಭಾಗ್ಯವಾಗಿದ್ದು, ಮಹಿಳೆಯರು ನಿಸ್ಸಂಕೋಚವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಡಾ|| ಅರುಣಕುಮಾರ್ ಮಾತನಾಡಿ ತಪಾಸಣೆಗೆ ಒಳಗಾಗಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಿದವರು ಎಸ್.ಎಸ್.ಆಸ್ಪತ್ರೆಗೆ ಆಗಮಿಸಿ ಹೆಚ್ಚಿನ ಚಿಕಿತ್ಸೆ ಪಡೆಯುವಂತೆ ತಿಳಿಸಿದರು.
ಶಿಬಿರದಲ್ಲಿ 15ನೇ ವಾರ್ಡ್‍ನ ಸುಮಾರು 340 ಮಹಿಳೆಯರು ವಿವಿಧ ತಪಾಸಣೆಗೆ ಒಳಗಾದರು.ಅದರಲ್ಲಿ 125 ಮಹಿಳೆಯರಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ, ಉಮಾಶಂಕರ್, ಡಾ|| ಶಾಂತಲಾ, ಡಾ|| ಅಶ್ವಿನಿ, ಡಾ|| ಕಮಲೇಶ್, ಡಾ|| ಜಮೀನುಲ್ಲಾ, ಡಾ|| ಪ್ರಿಯಾಂಕ, ಡಾ|| ಶಿಲ್ಪ, ಡಾ|| ಶಿವಕುಮಾರ್, ಡಾ|| ಪ್ರಶಾಂತ್, ಶುಭಮಂಗಳ, ವಿನಯ್, ಸ್ವಾಮಿ, ರವಿ, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಕಾಲೇಜು ಆಫ್ ಡೆಂಟಲ್ ಸೈನ್ಸ್ ವೈದ್ಯರು, ಶುಶ್ರೂಷಕರು, ಸಹಾಯಕ ಸಿಬ್ಬಂದಿ ಮತ್ತಿತರರಿದ್ದರು.