ಜಿಎಂಎಸ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಆಚರಣೆ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸಬೇಕಾಗಿದೆ: ಶ್ರೀಮತಿ ಶ್ವೇತ ಮರಿಗೌಡರ್
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂಎಸ್ ಅಕ್ಯಾಡಮಿ ಫಸ್ಟ್ ಗ್ರೇಡ್ ಕಾಲೇಜ್ ನಲ್ಲಿ ದಿನಾಂಕ 13ನೇ ಗುರುವಾರದಂದು ಕಾಲೇಜಿನ ತೆರೆದ ಸಭಾಂಗಣದಲ್ಲಿ “ಪರಿಚಯ್-2022” ಫ್ರೆಶರ್ಸ್ ಡೇ ಆಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೊಸತಾಗಿ ಬಂದ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಕೋರುತ್ತಾ, ಬರಮಾಡಿಕೊಳ್ಳುವ ಈ ಕಾರ್ಯಕ್ರಮವು ಬಹಳ ಸೊಗಸಾಗಿ ಮತ್ತು ಅದ್ದೂರಿಯಾಗಿ ನೆರವೇರಿದ್ದು, ನೋಡುಗರಲ್ಲಿ ಕಣ್ಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸುತ್ತಾ ಕಾರ್ಯಕ್ರಮದ ಯಶಸ್ಸಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಎದ್ದು ಕಾಣುತ್ತಿತ್ತು.
ಈ ವರ್ಣರಂಜಿತ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿಎಂಐಟಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ, ನಮ್ಮ ಕಾಲೇಜಿನ ಎಲ್ಲಾ ಹೊಸ ವಿದ್ಯಾರ್ಥಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಅತ್ಯುತ್ತಮವಾದ ಬೋಧನಾ ಸಂಪನ್ಮೂಲಗಳು, ಪ್ರಾಯೋಗಿಕ ಮಾನ್ಯತೆ ಮತ್ತು ತರಬೇತಿ ವಿಧಾನಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶ್ವೇತಾ ಮರಿಗೌಡರ್ ಮಾತನಾಡಿ ,ಫ್ರೆಶರ್ಸ್ ಡೇ ಜೀವನದ ಹೊಸ ಪ್ರಯಾಣದ ಆರಂಭವಾಗಿದೆ.ಹೊಸ ಬ್ಯಾಚ್ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಇದನ್ನು ಸಾಮಾನ್ಯವಾಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ ಇಂದು ನಮ್ಮ ಕಾಲೇಜಿನಲ್ಲೂ ಸಹ ಅದ್ದೂರಿಯಾಗಿ ಹೊಸ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳುತ್ತಿದ್ದೇವೆ ಮತ್ತು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಟ್ಟು, ಅವರುಗಳನ್ನು ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ರೂಪಿಸುವ ಭಾರ ನಮ್ಮ ಮೇಲೆ ಇದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ನೆರೆದ ಪ್ರೇಕ್ಷಕ ವರ್ಗದವರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಎಕ್ಸ್ ಸಿಯೆನ್ಸಿಯಾ ಕಂಪನಿಯ ನಿರ್ದೇಶಕರಾದ ಶ್ರೀ ಮಹಮ್ಮದ್ ಯಾಸೀನ್, ಜಿ ಎಂ ಹೆಚ್ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಡಾ ವೆಂಕಟರಾಯುಡು, ಸಹ ಆಡಳಿತ ಅಧಿಕಾರಿಗಳಾದ ಶ್ರೀ ಶಿವಕುಮಾರ್, ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗಾಧಿಕಾರಿ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಅಧ್ಯಾಪಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.