ಪತ್ರಕರ್ತರ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ : ಶಾಸಕ ಯತ್ನಾಳ

ವಿಜಯಪುರ: ಫೆ.4 ಮತ್ತು 5 ರಂದು ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ 37 ನೇ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ಮಂಗಳವಾರ ನಗರದಲ್ಲಿ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲು ಆಗಮಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ನೇತ್ರತ್ವದ ನಿಯೋಗದೊಂದಿಗೆ ಅವರು ಮಾತನಾಡಿದರು.
ಗುಮ್ಮಟನಗರಿಯಲ್ಲಿ ಈ ಬಾರಿಯ ರಾಜ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಜಯಪುರ ಜಿಲ್ಲೆ ಅತಿಥಿ ಸತ್ಕಾರಕ್ಕೆ ಹೆಸರಾದ ಜಿಲ್ಲೆ. ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ಅಂದಾಜು 5000 ಜನ ಪತ್ರಕರ್ತರಿಗೆ ಉತ್ತಮ ವಸತಿ, ಊಟದ ವ್ಯವಸ್ಥೆಯಾಗಬೇಕು. ಈ ದಿಸೆಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಾನಾ ಸಮಿತಿಗಳನ್ನು ರಚಿಸಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಕಳೆದ ಹಲವು ದಿನಗಳಿಂದ ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿರುವುದನ್ನು ಗಮನಿಸಿದ್ದೇನೆ. ತಮ್ಮೆಲ್ಲರ ಶ್ರಮ ಸಾರ್ಥಕವಾಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾರೈಸಿದರಲ್ಲದೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸಮ್ಮೇಳನದ ಸಿದ್ಧತೆಗಳ ಕುರಿತು ಶಾಸಕರಿಗೆ ವಿವರಿಸಿದರು.
ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶೆಟಗಾರ, ಪತ್ರಕರ್ತರಾದ ಅಶೋಕ ಯಡಹಳ್ಳಿ, ಗುರುರಾಜ ಗದ್ದನಕೇರಿ, ಶಶಿಕಾಂತ ಮೆಂಡೆಗಾರ, ದೀಪಕ ಶಿಂತ್ರೆ ಇದ್ದರು.

Leave a Reply

Your email address will not be published. Required fields are marked *

error: Content is protected !!