ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗಿರುವ ಆಸ್ಪತ್ರೆಗಳ ಪಟ್ಟಿ ತಯಾರಿಸಿ – ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್

ದಾವಣಗೆರೆ: ಜಿಲ್ಲೆಯಲ್ಲಿ ಗರ್ಭಪಾತ ಪ್ರಕರಣಗಳ ಸಂಖ್ಯೆ ಹೆಚ್ಚು ಹೆಚ್ಚು ದಾಖಲಾಗುತ್ತಿರುವ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಗಳ ಕಾರ್ಯವೈಖರಿ ಬಗ್ಗೆ, ಅನುಮಾನಗಳಿದ್ದು, ಇಂತಹ ಆಸ್ಪತ್ರೆಗಳನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದು ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳ ಅಧಿನಿಯಮ (ಲಿಂಗ ಆಯ್ಕೆಯ ನಿಷೇಧ) ಪಿಸಿ & ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್. ಕೆ. ಕಾಳಪ್ಪನವರ್ ಹೇಳಿದರು.
ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಪಿಸಿ & ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, 2011 ರ ಜನಗಣತಿಯಂತೆ ದಾವಣಗೆರೆ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಸಾವಿರಕ್ಕೆ 948 ದಾಖಲಾಗಿದೆ. ಲಿಂಗಾನುಪಾತ ಪ್ರಮಾಣದ ಬಗ್ಗೆ ಸಂಶಯಗಳಿದ್ದು, ಹೀಗಾಗಿ ಕಳೆದೊಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ನೊಂದಣಿಯಾದ ಒಟ್ಟು ಗರ್ಭಿಣಿಯರು, ಹೆರಿಗೆಗೆ ನೊಂದಣಿಯಾದವರು, ನೊಂದಣಿಯಾಗದವರು, ಗರ್ಭಪಾತಗೊಂಡವರು, ಯಾವುದೇ ಮಾಹಿತಿಗೆ ಒಳಗಾದವರ ಸಂಖ್ಯೆಯ ವಿವರವನ್ನು ಸಮಿತಿಗೆ ಒದಗಿಸುವಂತೆ ಡಾ. ಕಾಳಪ್ಪನವರ್ ಕೋರಿದರು. ಡಿಹೆಚ್‍ಒ ಡಾ. ನಾಗರಾಜ್ ಅವರು ವಿವರ ನೀಡಿ, ಕಳೆದ 2020 ರ ಏಪ್ರಿಲ್ ನಿಂದ ಮಾರ್ಚ್ 2021 ರ ವರೆಗೆ 23675 ಗರ್ಭಿಣಿಯರ ನೊಂದಣಿಯಾಗಿದ್ದು, ಹೆರಿಗೆಗಾಗಿ 20360 ಗರ್ಭಿಣಿಯರ ನೊಂದಣಿಯಾಗಿದೆ, ಈ ಪೈಕಿ ಒಟ್ಟು 2600 ಗರ್ಭಪಾತದ ಪ್ರಕರಣಗಳು ದಾಖಲಾಗಿವೆ.
715 ಗರ್ಭಿಣಿಯರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷ ಡಾ. ಕಾಳಪ್ಪನವರ್, ಉಡುಪಿ, ದಕ್ಷಿಣ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಲಿಂಗಾನುಪಾತ ಉತ್ತಮವಾಗಿದೆ. ಒಂದು ವರ್ಷದ ಅವಧಿಯಲ್ಲಿ 2600 ಗರ್ಭಪಾತ ಪ್ರಕರಣಗಳು ದಾಖಲಾಗಿದ್ದು, ಇದು ಗಂಭೀರ ವಿಷಯವಾಗಿದೆ. ಜಿಲ್ಲೆಯಲ್ಲಿನ ಹೆಣ್ಣು ಮಕ್ಕಳ ಲಿಂಗಾನುಪಾತದ ಪ್ರಮಾಣದ ಮೇಲೆ ಈ ಅಂಶಗಳು ಪರಿಣಾಮ ಬೀರಿರುವ ಸಾಧ್ಯತೆಗಳಿದ್ದು, ಲಿಂಗಾನುಪಾತದ ನಿಖರ ಅಂಕಿ ಅಂಶಗಳು ಸಮಿತಿಗೇ ಸರಿಯಾಗಿ ದೊರಕದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಗರ್ಭಪಾತ ವರದಿಯಾಗಿರುವ ಆಸ್ಪತ್ರೆ, ನರ್ಸಿಂಗ್ ಹೋಂ ಗಳ ಪಟ್ಟಿಯನ್ನು ತಯಾರಿಸಿ, ಇಂತಹ ಆಸ್ಪತ್ರೆಗಳ ಕಾರ್ಯವೈಖರಿಯನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯವಿದೆ ಎಂದರು. ಇದಕ್ಕೆ ಸಮಿತಿಯ ಎಲ್ಲ ಸದಸ್ಯರುಗಳು ಸಹಮತ ವ್ಯಕ್ತಪಡಿಸಿದರು. ಡಿಹೆಚ್‍ಒ ಡಾ. ನಾಗರಾಜ್ ಪ್ರತಿಕ್ರಿಯಿಸಿ, ಗರ್ಭಪಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಗರ್ಭಪಾತಕ್ಕೆ ಕಾರಣಗಳು, ಗರ್ಭಪಾತ ಎಷ್ಟನೇ ಹೆರಿಗೆಗೆ ಸಂಬಂಧಿಸಿದ್ದು ಎಂಬುದನ್ನು ಪರಿಶೀಲಿಸಬೇಕಿದೆ ಎಂದರು. ಎಸಿ ಮಮತಾ ಹೊಸಗೌಡರ್ ಮಾತನಾಡಿ, ಈಗಿನ ದಿನಗಳಲ್ಲಿ ಒಂದು ಅಥವಾ ಎರಡು ಮಕ್ಕಳನ್ನು ದಂಪತಿಗಳು ಪಡೆಯಲು ಬಯಸುವುದೇ ಹೆಚ್ಚು. ಹೀಗಾಗಿ ಗಂಡು ಮಗು ಬೇಕೆಂಬ ಆಶಯದೊಂದಿಗೆ ಗರ್ಭಪಾತ ಮಾಡಿಸಿರುವ ಸಾಧ್ಯತೆಗಳನ್ನೂ ಕೂಡ ತಳ್ಳಿಹಾಕುವಂತಿಲ್ಲ. ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಲಹಾ ಸಮಿತಿಯು ಹೆಚ್ಚಿನ ಗರ್ಭಪಾತ ದಾಖಲಾಗಿರುವ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ. ಹೀಗಾಗಿ ಕೂಡಲೆ ಜಿಲ್ಲೆಯಲ್ಲಿನ ಅಂತಹ ಆಸ್ಪತ್ರೆ, ನರ್ಸಿಂಗ್ ಹೋಂಗಳ ಪಟ್ಟಿಯನ್ನು ತಯಾರಿಸಿ ಸಮಿತಿಗೆ ಒದಗಿಸುವಂತೆ ಡಿಹೆಚ್‍ಒ ಅವರಿಗೆ ಸೂಚನೆ ನೀಡಿದರು.
ಸಮಿತಿ ಸದಸ್ಯ ಎಂ.ಜಿ. ಶ್ರೀಕಾಂತ್ ಅವರು, ಕೆಲವು ಆಸ್ಪತ್ರೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಿ (ಕೆಪಿಎಂಇ) ನೊಂದಣಿ ನವೀಕರಣ ಪ್ರಮಾಣ ಪತ್ರವಿಲ್ಲದೆ, ಸ್ಕ್ಯಾನಿಂಗ್ ಉಪಕರಣಗಳ ಅನುಮತಿಗಾಗಿ ಪಿಸಿ & ಪಿಎನ್‍ಡಿಟಿ ಸಮಿತಿಗೆ ಮನವಿ ಸಲ್ಲಿಸುವುದು ಆಕ್ಷೇಪಾರ್ಯ ಹಾಗೂ ನಿಯಮಬಾಹಿರವಾಗಿದೆ. ಇಂತಹ ಯಾವುದೇ ಮನವಿಗಳನ್ನು ಸಮಿತಿಗೆ ಮಂಡಿಸದಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‍ಒ ಡಾ. ನಾಗರಾಜ್, ಮುಂದೆ ಇಂತಹ ಕ್ರಮ ಆಗುವುದಿಲ್ಲ ಎಂದು ಭರವಸೆ ನೀಡಿದರು.
ಚನ್ನಗಿರಿಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಸ್ಕ್ಯಾನಿಂಗ್ ಉಪಕರಣ ಖರೀದಿಗೆ ಅನುಮತಿ ಪಡೆದು, ಇದೀಗ ಉಪಕರಣ ಅಳವಡಿಸಲು ಪಿಸಿ & ಪಿಎನ್‍ಡಿಟಿ ಬಾಲಿಕಾ ತಂತ್ರಾಂಶದಲ್ಲಿ ನೊಂದಣಿಗಾಗಿ ಮನವಿ ಸಲ್ಲಿಸಿರುತ್ತಾರೆ. ಆದರೆ ಪಶುಪಾಲನಾ ಇಲಾಖೆಯಿಂದ ಉಪಕರಣ ಬಳಕೆಗೆ ಅನುಮತಿ ನೀಡುವ ಕುರಿತು ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲ. ಅಲ್ಲದೆ ಉಪಕರಣ ಬಳಸಲು ಕಾಯ್ದೆಯನುಸಾರ ಹೊಂದಬೇಕಿರುವ ವಿದ್ಯಾರ್ಹತೆ, ಪ್ರಮಾಣಪತ್ರ ಪಶುವೈದ್ಯರು ಹೊಂದಿರುವ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಮಿತಿಯ ಅಧ್ಯಕ್ಷ ಡಾ. ಕಾಳಪ್ಪನವರ್ ಹೇಳಿದರು. ಡಿಹೆಚ್‍ಒ ಡಾ. ನಾಗರಾಜ್ ಉತ್ತರಿಸಿ, ಈ ಬಗ್ಗೆ ಪಶುಪಾಲನಾ ಇಲಾಖೆ ಅಗತ್ಯ ಪ್ರಮಾಣ ಪತ್ರ ಸಲ್ಲಿಸಬೇಕು, ವಿಳಂಬವಾದಲ್ಲಿ, ಅಲ್ಟ್ರಾಸೌಂಡ್ ಉಪಕರಣವನ್ನು ವಾಲೆಂಟರಿ ಡಿ-ಕಮಿಷನ್‍ಗೆ ಮನವಿ ಸಲ್ಲಿಸುವಂತೆ ತಿಳಿಸಿ ಹಿಂಬರಹ ನೀಡಲಾಗಿದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ತುಕಾರಾಂರಾವ್ ಬಿ.ವಿ., ಸಮಿತಿಯ ಸದಸ್ಯರುಗಳಾದ ಎಂ.ಜಿ. ಶ್ರೀಕಾಂತ್, ವಕೀಲರಾದ ವಿ.ಆರ್. ರವಿಕುಮಾರ್, ಡಾ. ಮೀರಾ ಹನಗವಾಡಿ, ಡಾ. ಸುಮಿತ್ರ, ಡಾ. ಎಸ್.ಜಿ. ಭಾರತಿ ಉಪಸ್ಥಿತರಿದ್ದರು.